ಬೆಂಗಳೂರು: ನ.3ರಂದು ನಡೆಯಲಿರುವ ಆರ್.ಆರ್.ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ರಕ್ತಪಾತವಾಗಲಿದೆಯೇ..? ಬಿಜೆಪಿ ಅಭ್ಯರ್ಥಿಯ ಹೇಳಿಕೆ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಕ್ಷೇತ್ರದಲ್ಲಿ ಕೊಲೆಗಳಾಗುವ ಆತಂಕವುಂಟಾಗಿದೆ. ಹೊರಗಿನಿಂದ ಬಂದವರು ಕೊಲೆ ಮಾಡುವ ಹಂತಕ್ಕೆ ಹೋಗಬೇಡಿ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಮನವಿ ಮಾಡಿರುವುದು ಜನರಲ್ಲಿ ಭಯ ಹುಟ್ಟಿಸುವಂತಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಆರ್.ಆರ್.ನಗರ ಉಪ ಚುನಾವಣೆಯಲ್ಲಿ ರಾಜಕೀಯ ಧ್ವೇಷ ವೈಯಕ್ತಿಕ ದ್ವೇಷವಾಗಿ ಬದಲಾಗುತ್ತಿದೆ. ಹೊರಗಡೆಯಿಂದ 4000 ಜನರನ್ನು ಕ್ಷೇತ್ರಕ್ಕೆ ಕರೆಸಿ ಬೆದರಿಕೆ ಹಾಕುತ್ತಿದ್ದಾರೆ. ಅವರು ಮನೆ ಮನೆಗಳಿಗೆ ಭೇಟಿ ನೀಡಿ ಸುಳ್ಳು ಆಶ್ವಾಸನೆಗಳನ್ನು ನೀಡಿ, ಅವರಿಂದ ದಾಖಲೆ ಪತ್ರಗಳನ್ನು, ವೋಟರ್ ಐಡಿ ಗಳನ್ನು, ಮೊಬೈಲ್ ನಂಬರ್ ಗಳನ್ನು ಪಡೆದುಕೊಂಡು ಹೋಗುತ್ತಿದ್ದಾರೆ. ಆರ್.ಆರ್. ನಗರ ಕ್ಷೇತ್ರಗಳಲ್ಲಿ ಕೊಲೆಗಳನ್ನು ಮಾಡುವ ಹಂತಕ್ಕೆ ಹೋಗಬೆಡಿ. ಇದರಿಂದ ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ತೊಂದರೆಯಾಗಲಿದೆ. ಅಂತಹ ಕೆಟ್ಟ ಸಂಸ್ಕೃತಿಗೆ ಕೈಹಾಕಬೇಡಿ ಎಂದು ಹೇಳಿದ್ದಾರೆ.
ಕ್ಷೇತ್ರದಲ್ಲಿ ನಡೆಯುತ್ತಿರುವ ಘಟನೆಗಳಿಂದ ನನ್ನ ಮನಸ್ಸಿಗೆ ತುಂಬಾ ನೋವುಂಟಾಗುತ್ತಿದೆ. ಹೊರಗಿನಿಂದ ಬಂದವರು ಕೊಲೆ ಮಾಡುವ ಸಾಧ್ಯತೆಯಿದೆ. ಆರ್.ಆರ್. ನಗರ ಕ್ಷೇತ್ರ ದೇವಾಲಯಗಳಿರುವ ಸ್ಥಳ, ಶಾಂತಿಯುತವಾದ ಕ್ಷೇತ್ರ. ಈ ಸ್ಥಳದಲ್ಲಿ ರಕ್ತಪಾತದಂತಹ ಘಟನೆಗಳು ನಡೆಯುವುದು ಬೇಡ. ದಯವಿಟ್ಟು ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಡಿ. ಇಲ್ಲಿ ನಿಯಮದ ಪ್ರಕಾರ ಚುನಾವಣೆ ನಡೆಸಲು ಅವಕಾಶ ನೀಡುವುದೇ ಅನುಮಾನವಾಗಿದೆ. ಹೀಗಾಗಿ ಉಪಚುನಾವಣೆ ವೇಳೆ ಅರೆ ಮಿಲಿಟರಿಯಲ್ಲ. ಮಿಲಿಟರಿ ಪಡೆಗಳನ್ನೇ ಕರೆಸಬೇಕು ಎಂದು ನಾನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ.