ತುಮಕೂರು: ನವೆಂಬರ್ 3ರಂದು ಶಿರಾ ಹಾಗೂ ಆರ್.ಆರ್. ನಗರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಕುಟುಂಬದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ ಎನ್ನಲಾಗಿದೆ. ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ನಡೆದ ಜೆಡಿಎಸ್ ಸಮಾವೇಶದ ವೇದಿಕೆಯಲ್ಲಿ ಕೂಡ ಇದು ಬಹಿರಂಗವಾಗಿದೆ.
ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರ ಚುನಾವಣಾ ಪ್ರಚಾರ ಸಂಬಂಧ ನಡೆದ ಜೆಡಿಎಸ್ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ. ರೇವಣ್ಣ ಅವರ ಹೆಸರು ಹೇಳಿಲ್ಲ. ಅಲ್ಲದೇ ಸಮಾವೇಶಕ್ಕೆ ರೇವಣ್ಣ ಅವರನ್ನು ಆಹ್ವಾನಿಸಿಲ್ಲ ಎನ್ನಲಾಗಿದೆ.
ಸಮಾವೇಶದಲ್ಲಿ ಭಾಷಣ ಆರಂಭಿಸಿದ ನಿಖಿಲ್, ವೇದಿಕೆ ಮೇಲೆ ಉಪಸ್ಥಿತರಿದ್ದ ಎಲ್ಲರ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಆದರೆ ಪ್ರಜ್ವಲ್ ಹೆಸರನ್ನು ಮಾತ್ರ ಹೇಳಿಲ್ಲ. ನಂತರ ಕ್ಷಮೆ ಕೇಳಿ ಹೆಸರು ಪ್ರಸ್ತಾಪ ಮಾಡಿದರು ಎನ್ನಲಾಗಿದೆ.
ಇನ್ನು ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣಗೆ ಹುಲಿಕುಂಟೆ ಹೋಬಳಿ ಉಸ್ತುವಾರಿ ನೀಡಲಾಗಿದೆ. ಆದರೆ ನಿಖಿಲ್ ಗೆ ಯಾವುದೇ ಉಸ್ತುವಾರಿ ನೀಡಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ನಿಖಿಲ್ ತೀವ್ರ ಅಸಮಾಧಾನಗೊಂಡು ವೇದಿಕೆ ಮೇಲೆ ಪ್ರಜ್ವಲ್ ಹೆಸರು ಹೇಳಿಲ್ಲ ಎನ್ನಲಾಗಿದೆ. ದೇವೇಗೌಡರ ಕುಟುಂಬದ ಅಸಮಾಧಾನ ಈಗ ಉಪಚುನಾವಣೆ ಬೆನ್ನಲ್ಲೇ ಬಹಿರಂಗವಾಗಿ ಸ್ಫೋಟಗೊಂಡಿದೆ ಎಂಬ ಚರ್ಚೆ ಕೂಡ ಆರಂಭವಾಗಿದೆ.