ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ನೆರೆ ಹಾವಳಿಯಿಂದ ರೈತರು ದಿಕ್ಕೆಟ್ಟು ಹೋಗಿದ್ದಾರೆ. ಉಪ ಚುನಾವಣೆಗಳಿಗಿಂತ ರೈತರ ಸಂಕಷ್ಟಕ್ಕೆ ಆದ್ಯತೆಯ ಮೇರೆಗೆ ಸ್ಪಂದಿಸಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸತತ ಎರಡು ವರ್ಷಗಳಿಂದ ನೆರೆಯಿಂದ ತತ್ತರಿಸಿರುವ ರಾಜ್ಯದ ರೈತರು ಈ ಬಾರಿ ಮತ್ತೆ ಮಳೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ, ಮನೆ-ಮಠ ಕಳೆದುಕೊಂಡು ನೆರೆಯಿಂದ ನೊಂದ ರಾಜ್ಯದ ರೈತರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು. ಈ ಮೂಲಕ ವಿಶ್ವಾಸ ತುಂಬುವ ಕೆಲಸವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ರಾಜ್ಯದ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಸಂಭವಿಸಿರುವ ಬೆಳೆ ಹಾನಿ, ಆಸ್ತಿ ನಷ್ಟಕ್ಕೆ ಸರ್ಕಾರ ತಕ್ಷಣ ವಿಶೇಷ ಅನುದಾನ ಘೋಷಣೆ ಮಾಡಬೇಕು. ನೆರೆಪೀಡಿತ ಪ್ರದೇಶಗಳ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಧಿಕಾರಿಗಳು ಮತ್ತು ಸಚಿವರನ್ನು ತಕ್ಷಣವೇ ನಿಯೋಜಿಸಬೇಕು ಎಂದು ಹೇಳಿದ್ದಾರೆ.