ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ವಿದ್ಯೆಗೆ ತಕ್ಕ ಹುದ್ದೆ ಸಿಕ್ಕುವುದು ಮರೀಚಿಕೆಯಾಗಿದೆ. ಅದರಲ್ಲೂ ಈಗ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಕಾರಣಕ್ಕೆ ನಿರುದ್ಯೋಗ ಮತ್ತಷ್ಟು ಹೆಚ್ಚಾಗಿದೆ.
ಇದಕ್ಕೆ ಉದಾಹರಣೆ ಎಂಬಂತೆ ಎಂಎಸ್ಸಿ ಪದವೀಧರೆಯೊಬ್ಬರು ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಸಮೀಪದ ಅಂಜಿನಾಪುರದಲ್ಲಿ ಎಂಎಸ್ಸಿ ಪದವೀಧರೆ ದೀಪಶ್ರೀ ಕೂಲಿ ಕೆಲಸ ಮಾಡುತ್ತಿದ್ದವರಾಗಿದ್ದಾರೆ.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗಣಿತ ವಿಷಯದಲ್ಲಿ ಎಂಎಸ್ಸಿ ಮಾಡಿರುವ ದೀಪಶ್ರೀ, ತಂದೆ – ತಾಯಿಗೆ ನೆರವಾಗುವ ಉದ್ದೇಶದಿಂದ ಕೂಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರ ಗಮನಕ್ಕೆ ಈ ವಿಷಯ ಬಂದಿದ್ದು, ಯುವತಿಗೆ ಉದ್ಯೋಗ ಕೊಡಿಸಲು ನೆರವಾಗುತ್ತೇನೆ ಎಂದು ಹೇಳಿದ್ದಾರೆ.