ರಾಜ್ಯದಲ್ಲಿ ಕೊರೊನಾ ವಕ್ಕರಿಸಿಕೊಂಡಿರುವ ಪರಿಣಾಮ ಈ ಹಿಂದೆ ಲಾಕ್ಡೌನ್ ಜಾರಿಗೊಳಿಸಿದ್ದು, ಇದರಿಂದ ಆರ್ಥಿಕ ಪರಿಸ್ಥಿತಿ ಮೇಲೆ ದೊಡ್ಡ ಹೊಡೆತ ಬಿದ್ದಿತ್ತು. ಹೀಗಾಗಿ ಇದನ್ನು ನಿಭಾಯಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿತ್ತು.
ಸದ್ಯಕ್ಕೆ ಯಾವುದೇ ಹೊಸ ನೇಮಕಾತಿಗಳನ್ನು ಮಾಡಿಕೊಳ್ಳದಿರಲು ತೀರ್ಮಾನಿಸಿದ್ದು, ಇದರ ಜೊತೆಗೆ ಈಗಾಗಲೇ ನೇಮಕಗೊಂಡಿರುವವರಿಗೆ ಸದ್ಯಕ್ಕೆ ನೇಮಕಾತಿ ಆದೇಶ ವಿತರಿಸದಿರಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿತ್ತು.
ಹೀಗಾಗಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರು ನಿರಾಸೆಗೊಂಡಿದ್ದು, ಇದೀಗ ಅವರಿಗೆ ಕರ್ನಾಟಕ ಲೋಕಸೇವಾ ಆಯೋಗ ಭರ್ಜರಿ ಸಿಹಿಸುದ್ದಿ ನೀಡಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 523 ಗ್ರೂಪ್-ಸಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 20 ರಿಂದ ಸೆಪ್ಟೆಂಬರ್ 19 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಸೆಪ್ಟೆಂಬರ್ 21 ಪರೀಕ್ಷಾ ಶುಲ್ಕ ಪಾವತಿಸಲು ಅಂತಿಮ ದಿನವಾಗಿದ್ದು, ಹುದ್ದೆಯ ಆಕಾಂಕ್ಷಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವರ್ಗಕ್ಕೆ 600 ರೂ. ಅರ್ಜಿ ಶುಲ್ಕವಾಗಿದ್ದು, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 300 ರೂ. ಶುಲ್ಕ ಇರುತ್ತದೆ. ಮಾಜಿ ಸೈನಿಕ 50 ರೂ. ಶುಲ್ಕವಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆದರೆ ಅರ್ಜಿ ಪ್ರಕ್ರಿಯಾ ಶುಲ್ಕವಾಗಿ 35 ರೂ. ನಿಗದಿಪಡಿಸಲಾಗಿದೆ.