ದೇಶಕ್ಕೆ ಮಹಾಮಾರಿಯಾಗಿ ವಕ್ಕರಿಸಿರುವ ಕೊರೊನಾ ದಿನೇ ದಿನೇ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದರ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಯಲ್ಲಿದ್ದರೂ ಸಹ ಬಹಳಷ್ಟು ಸಡಿಲಿಕೆ ಇರುವ ಕಾರಣ ಜನಜೀವನ ಯಥಾಪ್ರಕಾರ ಸಾಗಿದೆ.
ಇದರ ಮಧ್ಯೆ ಮುಂದೂಡಿಕೆಯಾಗಿದ್ದ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಜೊತೆಗೆ ಶಾಲಾರಂಭದ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಈ ಶೈಕ್ಷಣಿಕ ವರ್ಷ ಶಾಲೆ ಆರಂಭಿಸುವುದಕ್ಕೆ ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕ ಡಾ. ಕಲ್ಲಡ್ಕ ಪ್ರಭಾಕರ ಭಟ್ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಸಾಂಕ್ರಾಮಿಕ ರೋಗವಾಗಿರುವ ಕೊರೊನಾ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಶಾಲೆಗಳನ್ನು ಆರಂಭಿಸುವುದಕ್ಕೆ ಇದು ಸೂಕ್ತ ಸಮಯವಲ್ಲ ಎಂದು ಹೇಳಿರುವ ಅವರು, ಶುಲ್ಕದ ಹೆಸರಲ್ಲಿ ಶಿಕ್ಷಣ ಸಂಸ್ಥೆಗಳಿಂದ ಸುಲಿಗೆ ನಡೆಯುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಒಂದು ವರ್ಷದ ಬಳಿಕ ಶಾಲೆಗಳನ್ನು ಆರಂಭಿಸಿದರೆ ಯಾವ ತೊಂದರೆಯೂ ಇಲ್ಲ ಎಂದು ಹೇಳಿರುವ ಕಲ್ಲಡ್ಕ ಪ್ರಭಾಕರ ಭಟ್ ಸರ್ಕಾರಕ್ಕೆ ಈ ಕುರಿತಂತೆ ಮನವಿ ಮಾಡಿದ್ದಾರೆ.