ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟವನ್ನು ಎಲ್ಲರೂ ಬೆಂಬಲಿಸಬೇಕು. ನಾವೆಲ್ಲರೂ ರೈತರು ಬೆಳೆದ ಬೆಳೆ, ಅನ್ನವನ್ನು ತಿನ್ನುತ್ತಿರುವುದರಿಂದ ಪ್ರತಿ ಕ್ಷೇತ್ರದ ಜನರೂ ಅನ್ನದಾತನ ಹೋರಾಟಕ್ಕೆ ಬೀದಿಗಿಳಿದು ಬೆಂಬಲ ನೀಡಬೇಕು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟ ಕೇವಲ ರೈತ ಸಂಘಟನೆಗಳು ಇಲ್ಲವೇ ರಾಜಕೀಯ ಪಕ್ಷಗಳದ್ದಲ್ಲ. ಈ ಮಣ್ಣಿನ ಎಲ್ಲ ಸಾಹಿತಿಗಳು, ಕಲಾವಿದರು ವಿಶೇಷವಾಗಿ ಸಿನಿಮಾ ನಟ-ನಟಿಯರು ಬೀದಿಗಿಳಿದು ಹೋರಾಟ ನಿರತ ರೈತರನ್ನು ಬೆಂಬಲಿಸಬೇಕು. ನಾವೆಲ್ಲರೂ ರೈತರು ಬೆಳೆದ ಅನ್ನ ತಿನ್ನುವವರಲ್ಲವೇ? ಎಂದು ಹೇಳಿದ್ದಾರೆ.