ವಿಜಯಪುರ: ಸಿಎಂ ಯಡಿಯೂರಪ್ಪ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈಶ್ವರಪ್ಪನವರ ಆರೋಪಕ್ಕೆ ಮಹತ್ವ ನೀಡಬೇಕು. ಅವರು ಮಾಡಿರುವ ತಪ್ಪಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಬಿಜೆಪಿಯನ್ನು ಈ ಹಿಂದೆ ಕಟ್ಟಿದವರು ಈಶ್ವರಪ್ಪ. ನಿನ್ನೆ ಮೊನ್ನೆ ಬಂದವರು ಅವರ ಬಗ್ಗೆ ಕಮೆಂಟ್ ಮಾಡುವುದು ಸರಿಯಲ್ಲ. ನಾನು ಹಾಗೂ ಯಡಿಯೂರಪ್ಪ ಪಕ್ಷ ಬಿಟ್ಟು ಮತ್ತೆ ಬಂದವರು. ಆದರೆ ಈಶ್ವರಪ್ಪ ಬಿಜೆಪಿಯಲ್ಲೇ ಇದ್ದಾರೆ. ಅಲ್ಲದೇ ಹಿರಿಯ ಸಚಿವರು. ಕ್ಯಾಬಿನೇಟ್ ದರ್ಜೆ ಸಚಿವರಿಗೆ ಅಧಿಕಾರವೇ ಇಲ್ಲದಿದ್ದರೆ ಈಶ್ವರಪ್ಪ ಏನು ಮಾಡಬೇಕು? ಎಂದರು.
ರಾಜ್ಯದಲ್ಲಿ ನಡೆಯುತ್ತಿರುವುದು ಪ್ರಧಾನಿ ಮೋದಿಯವರ ಕನಸಿನ ಬಿಜೆಪಿ ಸರ್ಕಾರವಲ್ಲ. ಅಪ್ಪ-ಮಗನ ಸರ್ಕಾರ. ಅಪ್ಪ-ಮಗ ಕಾವೇರಿಯಲ್ಲಿ ಕುಳಿತು ಎಲ್ಲಾ ಇಲಾಖೆಗಳ ಡೀಲ್ ಮಾಡುತ್ತಿದ್ದಾರೆ. ವಿಜಯೇಂದ್ರ ಯಾವ ಸಂವಿಧಾನಿಕ ಹುದ್ದೆಯಲ್ಲಿದ್ದಾರೆ? ಇಷ್ಟಕ್ಕೂ ಈಶ್ವರಪ್ಪ ಮಾಡಿದ ತಪ್ಪಾದರೂ ಏನು? ಈಶ್ವರಪ್ಪನವರಿಗೆ ಕಳೆದ 1 ವರ್ಷದಿಂದ ತೊಂದರೆ ಕೊಟ್ಟಿದ್ದಾರೆ ಈಗ ಈಶ್ವರಪ್ಪನವರಿಗೆ ತಲೆ ಕೆಟ್ಟಿದೆ ಇದು ಹೀಗೆ ಮುಂದುವರಿದರೆ ಇನ್ನೂ ಹಲವರಿಗೆ ತಲೆ ಕೆಡಲಿದೆ ಎಂದು ಹೇಳಿದರು.
ಮೇ 2ರೊಳಗೆ ಪಕ್ಷದಲ್ಲಿ ಭಾರೀ ಸ್ಪೋಟವಾಗುತ್ತೆ. ಬಿ ಎಸ್ ವೈ ಬದಲಾಗದಿದ್ದರೆ ಇನ್ನೂ ದೊಡ್ದ ಸ್ಫೋಟ ಸಂಭವಿಸುತ್ತದೆ. ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದರು.
ಇದೇ ವೇಳೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಯಾಕೆ ಬಿ ಎಸ್ ವೈಗೆ ನಿರ್ದೇಶನ ನೀಡುತ್ತಿಲ್ಲ. ಈಶ್ವರಪ್ಪ ದೂರು ನೀಡಿದ್ದು ತಪ್ಪು ಎಂದಿದ್ದಾರೆ ಅರುಣ್ ಸಿಂಗ್ ಹೀಗೆ ಹೇಳುವುದೇ ತಪ್ಪು. ಅವರು ಈಶ್ವರಪ್ಪ ಪರವಾಗಿದ್ದಾರಾ? ಯಡಿಯೂರಪ್ಪ ಪರವಾಗಿದ್ದಾರಾ? ಅರುಣ್ ಸಿಂಗ್ ಗೆ ರಾಜ್ಯ ಉಸ್ತುವಾರಿ ನೀಡಲಾಗಿದೆ. ಅವರು ರಾಜ್ಯಕ್ಕೆ ಬರುತ್ತಾರೆ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರಗೆ ಶಹಬಾಸ್ ಗಿರಿ ಕೊಡುತ್ತಾರೆ ಹೋಗುತ್ತಾರೆ. ನಿಜಕ್ಕೂ ರಾಜ್ಯದಲ್ಲಿ ಏನು ನಡೆಯುತ್ತಿದೆ..? ಅರುಣ್ ಸಿಂಗ್ ಅವರೇ ಎಂದು ಪ್ರಶ್ನಿಸಿದರು.