ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ಸಂಜನಾ ಹಾಗೂ ರಾಗಿಣಿಗೆ ಕಳೆದ ಐದು ದಿನಗಳಿಂದ ಇ.ಡಿ. ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ನಟಿಯರಿಗೆ ಸಿನಿಮಾ ಅವಕಾಶಗಳು ಇಲ್ಲದಿದ್ದರೂ ಕೋಟಿ ಕೋಟಿ ಹಣ ಗಳಿಸುತ್ತಿದ್ದುದು ಹೇಗೆ ಎಂಬ ಬಗ್ಗೆ ಪ್ರಶ್ನಿಸಿದ್ದಾರೆ.
ಪ್ರಮುಖವಾಗಿ ನಟಿ ಸಂಜನಾ ಆದಾಯದ ಬಗ್ಗೆ ಇ.ಡಿ. ಅಧಿಕಾರಿಗಳು ಸಾಕಷ್ಟು ಪ್ರಶ್ನೆ ಮಾಡಿದ್ದಾರೆ. ಆಕೆಯ ಆದಾಯದ ಮೂಲ, ಹಣ ಹೂಡಿಕೆ, ಐಷಾರಾಮಿ ಜೀವನ, ವಿವಾಹದ ಬಗ್ಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಈವರೆಗೆ ಮಾಡಿರುವ ಸಿನಿಮಾ ಹಾಗೂ ಅದರಿಂದ ಬಂದ ಆದಾಯದ ಬಗ್ಗೆ ಉತ್ತರಿಸಿರುವ ಸಂಜನಾ, ಈವರೆಗೆ 42 ಚಿತ್ರಗಳನ್ನು ಮಾಡಿದ್ದು, ಆರಂಭದಲ್ಲಿ 5 ಲಕ್ಷ ಆದಾಯ ಬಂದಿದೆ. ಆ ಬಳಿಕ ನನ್ನ ಆದಾಯ ಹೆಚ್ಚಿರುವುದಾಗಿ ಹೇಳಿದ್ದಾರೆ.
ಇನ್ನು ಸಂಜನಾ ಮನೆಯಲ್ಲಿ ಸಿಕ್ಕ 25 ಚೆಕ್ ಗಳ ಬಗ್ಗೆ ಪ್ರಶ್ನಿಸಿದಾಗ ತಾನು ಬಡ್ಡಿ ವ್ಯವಹಾರ ನಡೆಸುತ್ತಿರುವುದಾಗಿ ಹಾಗೂ ಹಲವು ಉದ್ಯಮಿಗಳಿಗೆ ಸಾಲ ನೀಡಿದ್ದಾಗಿ ಹೇಳಿದ್ದಾರೆ. ತಾನು ದುಬೈನಲ್ಲಿ ಡಾ.ಅಜೀಜ್ ಪಾಷಾನನ್ನು ವಿವಾಹವಾಗಿದ್ದು, ಕೊರೊನಾ ಮುಗಿದ ಮೇಲೆ ಸಾರ್ವಜನಿಕವಾಗಿ ವಿವಾಹವಾಗುವ ಯೋಜನೆಯಿತ್ತು ಎಂದು ಸಂಜನಾ ಇ.ಡಿ. ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.