ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳ ದುರಂತ ಸರ್ಕಾರವೇ ನಡೆಸಿರುವ ಕೊಲೆ ಎಂದು ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಸೋಂಕಿತರ ಸಾವು ಸೋಂಕಿನಿಂದಾದ ಸಾವಲ್ಲ ‘ಸರ್ಕಾರಿ ಕೊಲೆ’ ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಇಲ್ಲದೆ ಮೃತಪಟ್ಟ 24 ಸೋಂಕಿತರ ಸಾವಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರೇ ನೇರ ಹೊಣೆ. ನೈತಿಕ ಹೊಣೆ ಹೊತ್ತು ಕೂಡಲೇ ಇಬ್ಬರೂ ಸಚಿವರು ರಾಜಿನಾಮೆ ನೀಡಬೇಕು ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಆಗ್ರಹಿಸಿದೆ.
ರಾಜ್ಯ ಸರ್ಕಾರಕ್ಕೆ ಪ್ರಚಾರ ಮುಖ್ಯವೇ ಹೊರತು ಜನರ ಜೀವವಲ್ಲ; ಡಿ.ಕೆ. ಶಿವಕುಮಾರ್ ವಾಗ್ದಾಳಿ
ಈ ಸಾವುಗಳು ಯಡಿಯೂರಪ್ಪ ಸರ್ಕಾರದ ನಿರ್ಲಕ್ಷ್ಯದಿಂದಾದ ಕೊಲೆ. ನಾಲಾಯಕ್ ಸರ್ಕಾರದ ಅಸಮರ್ಥ ಆಡಳಿತದಿಂದ ಚಾಮರಾಜನಗರ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಸೋಂಕಿತರು ಒಂದೇ ರಾತ್ರಿಯಲ್ಲಿ ಸಾವನ್ನಪ್ಪಿದ್ದಾರೆ ವ್ಯವಸ್ಥೆ ಎಚ್ಚರಗೊಳ್ಳಲು ಇನ್ನೆಷ್ಟು ಬಲಿಯಾಗಬೇಕು? ಹಲವು ದಿನಗಳಿಂದಲೂ ಆಕ್ಸಿಜನ್ ಕೊರತೆಯ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದರೂ ಸರ್ಕಾರಕ್ಕೆ ಗಾಂಭೀರ್ಯತೆ ಅರ್ಥವಾಗಿಲ್ಲ. ಚಾಮರಾಜನಗರದ ಉಸ್ತುವಾರಿ ಮಂತ್ರಿ ಸುರೇಶ್ ಕುಮಾರ್ ಅವರೇ, ಜಿಲ್ಲೆಗೆ ನೀವು ಕಾಲಿಟ್ಟಿದ್ದೀರಾ? ಕುಂದು ಕೊರತೆಗಳ ಬಗ್ಗೆ, ಕೋವಿಡ್ ನಿರ್ವಹಣೆಯ ಬಗ್ಗೆ ಗಮನ ಹರಿಸಿದ್ದೀರಾ? ಆಕ್ಸಿಜನ್ ಕೊರತೆಯಿಂದ ನಿಮ್ಮ ಸಹಾಯಕರೇ ತೀರಿಕೊಂಡ ಮೇಲೂ ತಾವು ಎಚ್ಚರಗೊಳ್ಳದೆ, ಸರ್ಕಾರದ ಗಮನ ಸೆಳೆಯದೆ ಕುಳಿತಿದ್ದೇಕೆ? ಎಂದು ಪ್ರಶ್ನಿಸಿದೆ.