ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಎಲ್ಲಾ ಸೌಲಭ್ಯಗಳಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಹೇಳಿದರು.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೆಮ್‍ಡಿಸಿವರ್ ಅವಶ್ಯಕತೆ ಇರುವಷ್ಟು ದಾಸ್ತಾನುಇದೆ. ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ರೆಮ್‍ಡಿಸಿವರ್ ಔಷಧದ ಕೊರತೆಯಿಲ್ಲವೆಂದು ಹೇಳಿದರು.
ಕೊರೋನಾ ಸೋಂಕು ರಾಜ್ಯದಲ್ಲಿ ಕಳೆದ ವರ್ಷ ಮಾ.9 ರಂದು ಮೊದಲ ಪ್ರಕರಣ ಕಂಡುಬಂದಿತ್ತು. ನಂತರದಲ್ಲಿ ಲಾಕ್‍ಡೌನ್ ಜಾರಿಯಾಗಿ ಮೇ 9 ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿ 8 ಪಾಸಿಟಿವ್ ಪ್ರಕರಣ ದಾಖಲಾಗಿದ್ದವು. ಇದುವರೆಗೆ ಜಿಲ್ಲೆಯಲ್ಲಿ 4,89,109 ಸ್ಯಾಂಪಲ್ ಸಂಗ್ರಹಿಸಲಾಗಿದ್ದು, 4,57,106 ನೆಗೆಟಿವ್ ವರದಿ ಬಂದಿದೆ. 23,216 ಪಾಸಿಟಿವ್ ವರದಿ ಬಂದಿದ್ದು, 22,321 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 352 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಎಸ್.ಎಸ್.ಎಲ್.ಸಿ. – ಪಿಯುಸಿ ಪರೀಕ್ಷೆ ಬಗ್ಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ
ಜಿಲ್ಲೆಯಲ್ಲಿ ಪ್ರಸ್ತುತ 583 ಸಕ್ರಿಯ ಪ್ರಕರಣಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ 97, ಖಾಸಗಿ ಆಸ್ಪತ್ರೆಗಳಲ್ಲಿ 62 ಸೋಂಕಿತರಿದ್ದಾರೆ. 382 ಮಂದಿ ಹೋಂ ಐಸೋಲೇಷನ್ ಲ್ಲಿದ್ದಾರೆ. ಕಳೆದ 10 ದಿನಗಳ ಅವಧಿಯಲ್ಲಿ 19489 ಸ್ಯಾಂಪಲ್ ಸಂಗ್ರಹಿಸಿದ್ದು, 18940 ನೆಗೆಟಿವ್ ವರದಿ ಬಂದಿದೆ. 549 ಪಾಸಿಟಿವ್ ಬಂದಿದೆ. ಪಾಸಿಟಿವ್ ದರ 2.8 ರಷ್ಟು ಇದೆ. ಶಿವಮೊಗ್ಗದಲ್ಲಿ 256, ಭದ್ರಾವತಿ 81, ಶಿಕಾರಿಪುರ 25, ಸಾಗರ 50, ತೀರ್ಥಹಳ್ಳಿ 36, ಹೊಸನಗರ 49, ಸೊರಬ 24, ಹೊರ ಜಿಲ್ಲೆಯವರು 31 ಸೋಂಕಿತರಿದ್ದಾರೆ ಎಂದು ತಿಳಿಸಿದರು.