ಬೆಂಗಳೂರಿನಲ್ಲಿ ಕೊರೊನಾ ಸೋಂಕು ತಾಂಡವವಾಡುತ್ತಿದೆ. ಕೊರೊನಾ ರಣಕೇಕೆ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಇದರ ಜೊತೆಗೆ ಸೋಂಕಿತರ ಸಂಖ್ಯೆಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಹಾಸಿಗೆಗಳ ಕೊರತೆ ಕೂಡ ಉಂಟಾಗುತ್ತಿದೆ. ಹೀಗಾಗಿ 1600 ಹಾಸಿಗೆ ಸಾಮರ್ಥ್ಯದ ಐದು ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲು ಬಿಬಿಎಂಪಿ ಮುಂದಾಗಿದೆ.
ಹೌದು, ಬೆಂಗಳೂರಿನಲ್ಲಿ ಒಟ್ಟು 5 ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲು ಸರ್ಕಾರ ಸೂಚನೆ ನೀಡಿದೆ. 200 ಹಾಸಿಗೆಯ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, 600 ಹಾಸಿಗೆಯುಳ್ಳ ಜಿಕೆವಿಕೆ ಕೃಷಿ ವಿದ್ಯಾರ್ಥಿ ನಿಲಯ ಹಾಗೂ 400 ಹಾಸಿಗೆಯುಳ್ಳ ಜಿಕೆವಿಕೆ ತೋಟಗಾರಿಕೆ ವಿದ್ಯಾರ್ಥಿ ನಿಲಯ, 200 ಹಾಸಿಗೆಯುಳ್ಳ ಸಿಟಿ ಸೆಂಟಾರ್ ಇಂಟರ್ ನ್ಯಾಷನಲ್ ಹೋಟೆಲ್, 200 ಹಾಸಿಗೆಯುಳ್ಳ ರೆಸಿಡೆನ್ಸಿ ರಸ್ತೆಯ ಚಾನ್ಸರಿ ಪೆವಿಲಿಯನ್ ಹೋಟೆಲನ್ನು ಗುರುತಿಸಲಾಗಿದೆ.
ಈ ಐದು ಕೇಂದ್ರಗಳಲ್ಲಿ ಕೊರೊನಾ ಲಕ್ಷಣರಹಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದರ ಜೊತೆಗೆ ಕೋರಮಂಗಲ ಕ್ರೀಡಾಂಗಣವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸುವ ಕಾರ್ಯ ಕೂಡ ಆರಂಭವಾಗಿದೆ. ಇಲ್ಲಿ 400 ರಿಂದ 450 ಹಾಸಿಗೆಗಳನ್ನು ಅಳವಡಿಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ.