ತುಮಕೂರು ಜಿಲ್ಲೆ ಹಲವು ಆಕರ್ಷಕ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಸಿದ್ಧಗಂಗಾ ಮಠ ಇಲ್ಲಿಗೆ ಹೆಚ್ಚಿನ ಹೆಸರು ತಂದು ಕೊಟ್ಟಿದೆ ಎಂದರೂ ತಪ್ಪಿಲ್ಲ. ಅನ್ನ, ವಿದ್ಯೆ ಮತ್ತು ವಸತಿಯ ಉಚಿತ ವ್ಯವಸ್ಥೆ ಇರುವ ತಾಣ ಇದಾಗಿದ್ದು ತ್ರಿವಿಧ ದಾಸೋಹದ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ. ಇದರ ಮುಂದಾಳತ್ವ ವಹಿಸಿದ್ದ ದಿ.ಶಿವಕುಮಾರ ಸ್ವಾಮೀಜಿಗಳು ಕರ್ನಾಟಕ ರತ್ನ ಪ್ರಶಸ್ತಿಯನ್ನೂ ಪಡೆದಿದ್ದರು.
ಬೆಂಗಳೂರಿನ ಲಾಲ್ ಬಾಗ್ ಗಾರ್ಡನ್ ಮತ್ತು ಮೈಸೂರಿನ ಶ್ರೀರಂಗಪಟ್ಟಣದ ಹೋಲಿಕೆಯಂತೆ ತುಮಕೂರಿನ ಶಿರಾದಲ್ಲಿ ಜುಮ್ಮಾ ಮಸ್ಜಿದ್ ಮತ್ತು ಮಲಿಕ್ ರಿಹಾನ್ ಕೋಟೆ ನಿರ್ಮಾಣವಾಗಿದೆ. ಇದು ಕೂಡಾ ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು.
ಹೊಯ್ಸಳರ ಕಾಲದಿಂದಲೂ ಪ್ರಸಿದ್ಧಿ ಹೊಂದಿರುವ ತುರುವೇಕೆರೆ ಇಲ್ಲಿನ ಇನ್ನೊಂದು ಐತಿಹಾಸಿಕ ತಾಣ. ಕುಣಿಗಲ್ ತಾಲ್ಲೂಕಿನ ಯಡೆಯೂರು ತೀರ್ಥಕ್ಷೇತ್ರ ದರ್ಶನಾರ್ಥಿಗಳಿಗೆ ಲಿಂಗಾಯತ ಸಮುದಾಯಕ್ಕೆ ಮುಖ್ಯವಾದ ಯಾತ್ರಾಸ್ಥಳ.
ಸೀಬಿ ಗ್ರಾಮದಲ್ಲಿರುವ ನರಸಿಂಹ ಸ್ವಾಮಿ ದೇವಾಲಯವೂ ತೀರ್ಥಕ್ಷೇತ್ರ ದರ್ಶನಾರ್ಥಿಗಳಿಗೆ ಬಹುಪ್ರಿಯ ತಾಣವಾಗಿದೆ.
ಹಾಗೇ ಇಲ್ಲಿನ ದೇವರಾಯನದುರ್ಗ ಕಾಡು ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಇಲ್ಲಿ ದೇವಾಲಯ, ಕೆರೆ, ಬೆಟ್ಟಗಳಿವೆ. ಸೂರ್ಯಾಸ್ತ ನೋಡಲು ಹೇಳಿ ಮಾಡಿಸಿದ ಜಾಗವಿದು. ಕಾಡಿನಲ್ಲಿ ಚಿರತೆ, ಕಾಡು ಹಂದಿ, ಜಿಂಕೆ ಮೊದಲಾದ ಪ್ರಾಣಿಗಳಿವೆ. ಮಧುಗಿರಿ, ಪಾವಗಡ, ಮತ್ತಿತರ ತಾಣಗಳೂ ಆಸುಪಾಸಿನಲ್ಲಿವೆ.