ಕೊರೊನಾದಿಂದಾಗಿ ಸಣ್ಣ ಉದ್ಯಮಿಗಳು, ರೈತರು ಸೇರಿದಂತೆ ಎಲ್ಲರ ಬದುಕು ಮೂರಾಬಟ್ಟೆಯಾಗಿದೆ. ಇನ್ನೂ ಚೇತರಿಕೆ ಹಂತ ಕಾಣುತ್ತಿಲ್ಲ. ಈ ಮಧ್ಯೆ ಸರ್ಕಾರ ಕೂಡ ಅನೇಕ ಯೋಜನೆಗಳನ್ನು ಇಂತವರಿಗಾಗಿ ಜಾರಿಗೆ ತರುತ್ತಲೇ ಇದೆ.
ಇದೀಗ ಮತ್ತೊಂದು ಯೋಜನೆ ಜಾರಿಗೆ ತಂದಿದ್ದು, ಇಲ್ಲಿ ಆರ್ಥಿಕವಾಗಿ ಹಿಂದುಳಿದವರೂ ಉದ್ಯಮಿಗಳಾಗಬಹುದಾಗಿದೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಹಾಗೂ ಫ್ರಾಂಚೈಸಿ ಸಂಸ್ಥೆಗಳು ಮತ್ತು ಫಲಾನುಭವಿಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಹೌದು, ಸಮಾಜ ಕಲ್ಯಾಣ ಇಲಾಖೆಯಿಂದ ಜಾರಿಗೆ ತಂದಿದ್ದ ಸಮೃದ್ಧಿ ಯೋಜನೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡಲಾಗುತ್ತಿದೆ. ಖಾಸಗಿ ಸಂಸ್ಥೆ ಜೊತೆಗೂಡಿ ಫ್ರಾಂಚೈಸಿ ಪಡೆದುಕೊಂಡು ಉದ್ಯಮ ಮಾಡುವ ಫಲಾನುಭವಿಗಳು ಇದರ ನೆರವು ಪಡೆಯಬಹುದು. ಇಲಾಖೆಯಿಂದ ಜಾರಿಗೆ ತಂದಿದ್ದ ಸಮೃದ್ಧಿ ಯೋಜನೆಯಡಿ ಇವರಿಗೆ ಸುಮಾರು 10 ಲಕ್ಷ ರೂ.ವರೆಗೂ ನೆರವು ನೀಡಲಾಗುತ್ತದೆ.
800 ಫಲಾನುಭವಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಾಕಷ್ಟು ಜನ ಫಲಾನುಭವಿಗಳು ಇದರ ಉಪಯೋಗ ಪಡೆದುಕೊಂಡು ಉದ್ಯಮ ಪ್ರಾರಂಭಿಸಿದ್ದಾರೆ. ಇಲಾಖೆಯಿಂದ ನೀಡುವ ಹಣವನ್ನು ನೇರವಾಗಿ ಫಲಾನುಭವಿಗಳಿಗೆ ನೀಡುವ ಬದಲು ಎಸ್ಕ್ರೋ ಖಾತೆಯಲ್ಲಿ ಇಡಲಾಗುತ್ತದೆ. ಶಾಖೆಯನ್ನು ತೆರೆಯೋದಿಕ್ಕೆ, ಮಳಿಗೆ ವಿನ್ಯಾಸ ಸೇರಿದಂತೆ ಇತರ ಖರ್ಚುಗಳಿಗೆ ಈ ಹಣ ಬಳಕೆಯಾಗುತ್ತದೆ.