ವಿಜಯಪುರ: ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟ ಮುಂದುವರೆದಿದಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ನಡುವೆ ಇದ್ದಿಲು ತಯಾರಿಸಲು ಡೋಣಿ ನದಿಯ ನಡುಗಡ್ಡೆಗೆ ತೆರಳಿದ್ದ ಕುಟುಂಬವೊಂದು ಕಳೆದ ನಾಲ್ಕು ದಿನಗಳಿಂದ ನಡುಗಡ್ಡೆಯಲ್ಲಿ ಸಿಲುಕಿ ರಕ್ಷಣೆಗಾಗಿ ಪರದಾಡಿದ ಘಟನೆ ನಡೆದಿದೆ.
ವಿಜಯಪುರದ ತಾಳಿಕೋಟೆಯ ಡೋಣಿ ನದಿಯ ನಡುಗಡ್ಡೆಗೆ ಇದ್ದಿಲು ತಯಾರಿಸಲು ಮಹಾರಾಷ್ಟ್ರ ಮೂಲದ ದಂಪತಿ ಹಾಗೂ ಮೂವರು ಮಕ್ಕಳು ಹೋಗಿದ್ದಾರೆ. ಈ ವೇಳೆ ಭಾರಿ ಮಳೆಯಿಂದಾಗಿ ಡೋಣಿ ನದಿಯ ನೀರು ಅಪಾಯದ ಮಟ್ಟದಲ್ಲಿ ಏರಿದೆ. ನೀರಿನ ಮಟ್ಟ ಕಡಿಮೆಯಾಗಬಹುದು ಎಂದು ನಾಲ್ಕು ದಿನಗಳ ಕಾಲ ನಡುಗಡ್ಡೆಯಲ್ಲೇ ಕಾದಿದ್ದಾರೆ. ಆದರೆ ನದಿ ನೀರು ಇನ್ನಷ್ಟು ಅಪಾಯದ ಮಟ್ಟದಲ್ಲಿ ಏರುತ್ತಿದ್ದು, ನಡುಗಡ್ಡೆಯನ್ನು ಆವರಿಸಲು ಪ್ರಾರಂಭವಾಗಿದೆ. ಭಯಭೀತರಾದ ಕುಟುಂಬದ 7 ಜನ ಕಂದಾಯ ಇಲಾಖೆಯವರಿಗೆ ಕರೆ ಮಾಡಿದ್ದಾರೆ.
ಇದೀಗ ನಡುಗಡ್ಡೆಯಲ್ಲಿ ಸಿಲುಕಿದ್ದ 7 ಜನರನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರ ಸಹಾಯದಿಂದ ರಕ್ಷಿಸಲಾಗಿದೆ.