ಕೊರೊನಾ ಹಲವು ಮಂದಿಯ ಜೀವನ ಶೈಲಿಯನ್ನೇ ಬದಲಾಯಿಸಿದ್ದು ಈಗ ಹಳೇ ಸಂಗತಿ. ದಿನಕ್ಕಿಷ್ಟು ಗಂಟೆ ಎಂಬಂತೆ ಕಡ್ಡಾಯವಾಗಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಂದಿ ಈಗ ಸಮಯದ ಅವಧಿಯನ್ನು ಪಕ್ಕಕ್ಕಿಟ್ಟು ಕೊಟ್ಟ ಕೆಲಸ ಮುಗಿಸಿ ಎಂಬ ಸೂತ್ರವನ್ನು ಪಾಲಿಸುತ್ತಿದ್ದಾರೆ.
ಅವರಿಗೂ ಮನೆಯೊಳಗೇ ಕೂತು ಬೇಸರವಾಗುತ್ತಿದೆ. ಅದಕ್ಕೆಂದೇ ಅರಂಭವಾದ ಹೊಸ ಕಾನ್ಸೆಪ್ಟ್, ವರ್ಕ್ ಫ್ರಮ್ ಹಿಲ್ಸ್. ಇದಕ್ಕಾಗಿ ಮಹಾನಗರಗಳಲ್ಲಿರುವ ಮಂದಿ ಅದನ್ನು ತೊರೆದು ತಮ್ಮ ಮೂಲ ಮನೆಗೆ ಹಿಂದಿರುಗಿದ್ದಾರೆ. ಈಗ ಬಹುತೇಕ ಎಲ್ಲಾ ಹಳ್ಳಿಗಳಲ್ಲೂ ಅಂತರ್ಜಾಲ ಸಂಪರ್ಕ ಲಭ್ಯವಿರುವುದರಿಂದ ಕೆಲಸ ಮಾಡುವುದು ಕಷ್ಟವೇನಲ್ಲ. ಹೀಗೆ ಬಹುತೇಕರು ತಮ್ಮ ತವರೂರಿಗೆ ಮರಳಿದ್ದರೆ ಮತ್ತೆ ಕೆಲವರು ಕೆಲಸ ಮಾಡಲೆಂದೇ ರೆಸಾರ್ಟ್ ಬುಕ್ ಮಾಡುತ್ತಿದ್ದಾರಂತೆ.
ಬೆಟ್ಟಗುಡ್ಡಗಳಿಂದ ಕೂಡಿದ ಮಲೆನಾಡು, ಉತ್ತರ ಕನ್ನಡದ ಜನರು ತವರಿಗೆ ಹಿಂದಿರುಗಿದ್ದರೆ ಉತ್ತಮ ಸಂಬಳ ಪಡೆಯುವ ಒಂದಷ್ಟು ಜನ ಹಿಲ್ ಸ್ಟೇಶನ್, ರೆಸಾರ್ಟ್ ಗಳನ್ನು ಬುಕ್ ಮಾಡುತ್ತಿದ್ದಾರೆ. ಚಿಕ್ಕಮಗಳೂರು, ಕೇರಳ, ಊಟಿ ಮೊದಲಾದ ಸುಂದರ ಪ್ರಾಕೃತಿಕ ತಾಣಗಳಲ್ಲಿರುವ ರೆಸಾರ್ಟ್ ಗಳಿಗೆ ಉತ್ತಮ ಬೇಡಿಕೆ ಬರುತ್ತಿದೆ. ಇಲ್ಲಿ 20ರಿಂದ 30 ದಿನ ಕೋಣೆಗಳನ್ನು ಬುಕ್ ಮಾಡಿ ಕುಟುಂಬ ಸಮೇತ ಕಳೆಯಲು ಹಲವು ಉದ್ಯೋಗಸ್ಥರು ಮುಂದಾಗಿದ್ದಾರೆ.
ಲಾಕ್ ಡೌನ್ ಕಾರಣದಿಂದ ಸಪ್ಪೆಯಾಗಿದ್ದ ರೆಸಾರ್ಟ್ ಮಾಲೀಕರೂ ಈಗ ಖುಷಿ ಪಡುವಂತಾಗಿದೆಯಂತೆ. ಈ ಮೂಲಕವಾದರೂ ಪ್ರವಾಸಿ ತಾಣಗಳಿಗೆ ಮತ್ತೆ ಕಳೆ ಬಂದರೆ ಸಾಕು ಎನ್ನುತ್ತಿದ್ದಾರಂತೆ.