ಬೆಂಗಳೂರು: ಉಪಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳು ಮತದಾರರ ಮನವೊಲಿಕೆಗಾಗಿ ಕಣ್ಣೀರ ಕೋಡಿಯನ್ನೇ ಹರಿಸಿದ್ದಾರೆ. ನಿನ್ನೆ ಆರ್.ಆರ್. ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ಹಾಕಿದ್ದರೆ, ಇಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಸರದಿ.
ನಾನು ಚುನಾವಣಾ ಅಖಾಡಕ್ಕೆ ಇಳಿದ ದಿನದಿಂದಲೂ ನನಗೆ ನೋವು ಕೊಟ್ಟಿದ್ದಾರೆ. ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಯಾಕೆ ಈ ರೀತಿ ಮಾಡುತ್ತಿದ್ದಾರೆ ನನಗೆ ಗೊತ್ತಿಲ್ಲ. ನನಗೆ ಡಿ.ಕೆ. ರವಿ ಹೆಸರು ಬಳಸುವ ಯೋಗ್ಯತೆ ಇಲ್ಲ ಎಂದು ನಾಮಪತ್ರ ಸಲ್ಲಿಕೆಗೂ ಮೊದಲಿನಿಂದ ಬಿಜೆಪಿಯವರು ಹೇಳುತ್ತಲೇ ಬಂದರು. ನಾನು ಡಿ.ಕೆ. ರವಿಯವರನ್ನು ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದೇನೆ. ಯಾಕೆ ನನ್ನ ಬಗ್ಗೆ ವಿಪಕ್ಷಗಳು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ? ನಾನು ಮಾಡಿದ ತಪ್ಪಾದರೂ ಏನು ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಕಣ್ಣೀರು ಒಂದು ದಿನದ ಕಣ್ಣೀರಲ್ಲ. 2015ರಿಂದ ದಿನವೂ ಕಣ್ಣೀರು ಹಾಕುತ್ತಿದೇನೆ. ನಾನು ನನ್ನ ನೋವನ್ನು ಇದುವರೆಗೂ ಯಾರಿಗೂ ತೋರಿಸಿಕೊಂಡಿಲ್ಲ. ಇಷ್ಟಕ್ಕೂ ನಾನು ಏನು ತಪ್ಪು ಮಾಡಿದ್ದೇನೆ, ನಾನು ಹೆಣ್ಣಾಗಿ ಹುಟ್ಟಿದ್ದು ತಪ್ಪಾ? ಹೆಣ್ಣು ರಾಜಕೀಯಕ್ಕೆ ಬರಲೇ ಬಾರದೇ…? ಪ್ರಜಾಪ್ರಭುತ್ವದಲ್ಲಿ ಹೆಣ್ಣಿಗೆ ರಾಜಕೀಯವಾಗಿ ಬೆಳೆಯುವ ಅವಕಾಶವಿಲ್ಲವೇ..? ನನ್ನನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನವಾದರೂ ಏಕೆ ಎಂದು ಕಣ್ಣೀರಾದರು.
ನಾನು ನೋವಿನಲ್ಲಿದ್ದರೂ ಜನರ ಕಣ್ಣೀರು ಒರೆಸುವ ಶಕ್ತಿ ನನಗಿದೆ. ಅವರ ಸಂಕಷ್ಟಗಳನ್ನು ನಿವಾರಿಸಲು ನನಗೆ ಒಂದು ಅವಕಾಶ ನೀಡಬೇಕು. ಜನರು ತಮ್ಮ ಅಮೂಲ್ಯ ಮತಗಳನ್ನು ನೀಡಿ ಉಪಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.