ಬೆಂಗಳೂರು: ಈ ರಾಷ್ಟ್ರದ ಅನ್ನದಾತರಿಗೆ ಪ್ರತಿ ಹಂತದಲ್ಲೂ ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದೆ. ಈ ಅನ್ಯಾಯದ ವಿರುದ್ಧ ಕಾಂಗ್ರೆಸ್ ರೈತರ ಪರ ನಿಂತು ಹೋರಾಟ ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ರೈತರು ನಡೆಸುತ್ತಿರುವ ರಾಜಭವನ ಚಲೋ ಪ್ರತಿಭಟನಾ ರ್ಯಾಲಿ ಫ್ರೀಡಂ ಪಾರ್ಕ್ ತಲುಪಿದ್ದು, ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಇದು ಕಾಂಗ್ರೆಸ್ ಹೋರಾಟವಲ್ಲ. ಇದು ರಾಷ್ಟ್ರದ, ರಾಜ್ಯದ, ಬಡವರ, ರೈತರ ಪರವಾದ ಧ್ವನಿ. 3 ಶಾಸನಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಶಾಸನಗಳು ರೈತರಿಗೆ ಮರಣ ಶಾಸನಗಳಾಗಿವೆ. ಈ ಮಸೂದೆಗಳು ದೇಶದ ಬೆನ್ನೆಲುಬಾಗಿರುವ ಅನ್ನದಾತನಿಗೆ ಮರಣ ಶಾಸನವಾಗಿದೆ. ಕೃಷಿ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಈ ವರ್ಷ ಸಂಘಟನೆಯ ವರ್ಷ. ಚುನಾವಣೆ ನಡೆಯುವವರೆಗೂ ಹೋರಾಟದ ವರ್ಷ. ದೇಶದ ರೈತರು ರಸ್ತೆಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೂ ಸರ್ಕಾರಕ್ಕೆ ಇದಾವುದೂ ಗಮನಕ್ಕೆ ಬರುತ್ತಿಲ್ಲವೇ? ನಮ್ಮ ಹೋರಾಟ ರಾಜ್ಯಕ್ಕೆ ಸೀಮಿತವಲ್ಲ. ಮುಖ್ಯಮಂತ್ರಿಗಳೇ ಯಾವ ರೈತರಿಗೆ, ಯಾವ ಚಾಲಕರಿಗೆ ಹಣ ಸಿಕ್ಕಿದೆ? ಅನ್ನದಾತನಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ. ಜನಸಾಮಾನ್ಯರಿಗೂ ರೈತರಿಗಾಗುತ್ತಿರುವ ಅನ್ಯಾಯ ತಿಳಿಯಬೇಕಿದೆ. ಆ ನಿಟ್ಟಿನಲ್ಲಿ ಹೋರಾಟ ನಡೆಯಲಿದೆ ಎಂದು ಹೇಳಿದರು.