ಇಂದು ಬೆಳಿಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗುತ್ತಾ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಇಂದಿನ ಸಂಪುಟ ಸಭೆಯಲ್ಲಿ ಈ ಕುರಿತು ಸಮಗ್ರ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದ್ದು, ಲಾಕ್ ಡೌನ್ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಮತ್ತೊಮ್ಮೆ ಲಾಕ್ ಡೌನ್ ಜಾರಿ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಪರ – ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿದ್ದು, ಒಂದು ವಲಯ ಜೀವವಿದ್ದರೆ ಜೀವನ. ಹೀಗಾಗಿ ಲಾಕ್ ಡೌನ್ ಜಾರಿ ಮಾಡಿದರೆ ಸೂಕ್ತ ಎಂದು ವಾದಿಸುತ್ತಿದ್ದರೆ, ಮತ್ತೊಂದು ವರ್ಗ, ಕಳೆದ ಬಾರಿಯ ಲಾಕ್ ಡೌನ್ ನಿಂದಲೇ ನಮ್ಮ ಬದುಕು ಸಂಕಷ್ಟಕ್ಕೊಳಗಾಗಿದೆ. ಮತ್ತೊಮ್ಮೆ ಲಾಕ್ ಡೌನ್ ಜಾರಿ ಮಾಡಿದರೆ ಜೀವನವೇ ಮುಗಿದು ಹೋಗುತ್ತದೆ. ಹೀಗಾಗಿ ಲಾಕ್ ಡೌನ್ ಬೇಡ ಎಂದು ಹೇಳುತ್ತಿದೆ.
ಇದರ ಮಧ್ಯೆ ತಜ್ಞರು, ರಾಜ್ಯ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿದ್ದಾರೆ ಎನ್ನಲಾಗಿದ್ದು, ರಾಜ್ಯದ ಪಾಲಿಗೆ ಮುಂದಿನ 15 ದಿನಗಳು ನಿರ್ಣಾಯಕವಾಗಲಿದೆ ಎಂದು ತಿಳಿಸಿದೆಯೆಂದು ಹೇಳಲಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿಯೇ ಸೋಂಕು ಹೆಚ್ಚಿರುವ ಕೆಲ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗುತ್ತಿದೆ.
ಕಳೆದ ಬಾರಿಯ ಲಾಕ್ ಡೌನ್ ನಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿದ್ದು, ಮತ್ತೊಮ್ಮೆ ಲಾಕ್ ಡೌನ್ ಜಾರಿ ಮಾಡಿದರೆ ನೌಕರರಿಗೆ ಸಂಬಳ ನೀಡಲೂ ಕಷ್ಟವಾಗುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಲಾಕ್ ಡೌನ್ ಜಾರಿ ಕುರಿತಂತೆ ಸರ್ಕಾರ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದು, ಹೀಗಾಗಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅಮೂಲಾಗ್ರ ಚರ್ಚೆ ನಡೆಸಿ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.