ಬೆಂಗಳೂರು: ನವರಾತ್ರಿ ಹಬ್ಬದ ನಡುವೆಯೇ ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚುತ್ತಿದ್ದು, ಈ ನಡುವೆ ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಾಲಯಕ್ಕೆ ಭಕ್ತರಿಗೆ ಇಂದಿನಿಂದ ಪ್ರವೇಶ ನಿಷೇಧಿಸಲಾಗಿದೆ.
ನವರಾತ್ರಿ ಹಿನ್ನೆಲೆಯಲ್ಲಿ ಬನಶಂಕರಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದೆ. ಭಕ್ತರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಇನ್ನಷ್ಟು ಹೆಚ್ಚುವ ಭೀತಿ ಎದುರಾಗಿದ್ದರಿಂದ ಇಂದಿನಿಂದ ನವೆಂಬರ್ 1ರವರೆಗೆ ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ನಿನ್ನೆಯಿಂದ ದಸರಾ ಆರಂಭವಾಗಿದ್ದು, ನಿನ್ನೆ ಒಂದೇ ದಿನದಲ್ಲಿ ಮೂರು ಸಾವಿರಕ್ಕೂ ಅಧಿಕ ಭಕ್ತರು ಬನಶಂಕರಿ ಅಮ್ಮನವರ ದರ್ಶನಕ್ಕೆ ಆಗಮಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದ ಭಕ್ತರಿಗೆ ದೇವಾಲಯಕ್ಕೆ ನಿರ್ಬಂಧ ವಿಧಿಸಲಾಗಿದೆ.