ಬೆಂಗಳೂರು: ಉಪಚುನಾವಣೆಯಲ್ಲಿ ಆರ್.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಇಂದಿನಿಂದ 20 ಗಂಟೆಗಳ ಕಾಲ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಉಪಚುನಾವಣೆಯಲ್ಲಿ ಗೆಲುವು ಹಿನ್ನೆಲೆಯಲ್ಲಿ ಮಾತನಾಡಿದ ಮುನಿರತ್ನ, ಆರ್.ಆರ್. ನಗರ ಕ್ಷೇತ್ರ ಎಲ್ಲಾ ಕ್ಷೇತ್ರಗಳಿಗಿಂತ, ಹಳೇ ಬೆಂಗಳೂರಿಗಿಂತ ಹೆಚ್ಚು ಅಭಿವೃದ್ಧಿಯಾಗಬೇಕು ಎಂಬುದು ನನ್ನ ಆಸೆ. ಈ ಬಾರಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, 2-3 ವರ್ಷಗಳ ಅವಧಿಯಲ್ಲಿ ಸಾಧ್ಯವಾದ ಮಟ್ಟಿಗೆ ಕ್ಷೇತ್ರದ ಜನತೆಗಾಗಿ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಮತದಾರರ ಋಣ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದರು.
ಮೊದಲ ಬಾರಿ 17 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೆ. ಎರಡನೇ ಬಾರಿ 26 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆ. ಈಗ ಮೂರನೇ ಬಾರಿಗೆ 57 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿರುವುದು ಸಂತಸ ತಂದಿದೆ. ನನ್ನ ಈ ಅಂತರದ ಗೆಲುವನ್ನು ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾದ್ಯಕ್ಷರು, ಶಾಸಕರು, ಸಚಿವರು, ಕಾರ್ಯಕರ್ತರು ಎಲ್ಲರಿಗೂ ಅರ್ಪಿಸುತ್ತೇನೆ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ಅಭ್ಯರ್ಥಿ ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು. ನಾನು ಮಹಿಳೆಯನ್ನು ಯಾವತ್ತೂ ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ. ನನ್ನ ಕೊನೇ ಉಸಿರು ಇರುವವರೆಗೂ ಹೆಣ್ಣಿನ ಬಗ್ಗೆ ಕೆಟ್ಟ ಶಬ್ದಗಳಿಂದ ಬಯ್ಯುವುದೂ ಇಲ್ಲ. ಆದರೂ ಪ್ರತಿಸ್ಪರ್ಧಿ ಇಂತಹ ಆರೋಪ ಮಾಡಿದ್ದರು. ಇನ್ನು ಮುಂದಾದರೂ ಇಂತಹ ಸುಳ್ಳು ಆರೋಪಗಳನ್ನು ಮಾಡಬೇಡಿ. ಸತ್ಯ ಮಾತನಾಡಿ ಎಂದರು.