ಬೆಳಗಾವಿ: ಕೊರೊನಾ ಸೋಂಕಿನ ಬಗ್ಗೆ ನಾವು ನಿರ್ಲಕ್ಷ್ಯ ವಹಿಸಿದ್ದೆವು. ಈಗದು ವ್ಯಾಪಕವಾಗಿ ಹರಡಿ ಜೀವ ಹಿಂಡುತ್ತಿದೆ. ನಮ್ಮ ನಿಯಂತ್ರಣಕ್ಕೂ ಸಿಗದ ಪರಿಸ್ಥಿತಿ ಎದುರಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಇದೀಗ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ, ನಮ್ಮ ಕುಟುಂಬದ 18 ಜನರಿಗೆ ಕೊರೊನಾ ಸೋಂಕು ಬಂದಿತ್ತು. ಹಲವರು ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ನಾನು ಸೇರಿದಂತೆ ಐವರು ಇಂದು ಡಿಸ್ಚಾರ್ಜ್ ಆಗಿದ್ದೇವೆ ಎಂದರು.
ಚರ್ಚೆ ಜಾಸ್ತಿಯಾಯ್ತು, ಮೊದಲು ಜನರಿಗೆ ಉಚಿತ ಲಸಿಕೆ ಕೊಡಿ: ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಖಡಕ್ ಮಾತು
ಕೊರೊನಾ ವೈರಸ್ ಬಗ್ಗೆ ನಾವು ಆರಂಭದಲ್ಲಿ ನಿರ್ಲಕ್ಷ ಮಾಡಿದ್ವಿ. ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ನಮ್ಮ ಕುಟುಂಬದ 18 ಜನರು ಸೋಂಕಿನಿಂದ ಬಳಲಿದ್ದೇವೆ. ಈ ವೈರಸ್ ಇಷ್ಟೊಂದು ತೀವ್ರತೆ ಹೊಂದಿದೆ ಎಂದು ಗೊತ್ತಿರಲಿಲ್ಲ. ಇದೊಂದು ಬಹಳ ಕೆಟ್ಟ ರೋಗ, ಅನುಭವಿಸಿದವರಿಗೆ ಮಾತ್ರ ಆ ನೋವು ಗೊತ್ತು. ಇಂತಹ ರೋಗ ನಮ್ಮ ವೈರಿಗಳಿಗೂ ಬರುವುದು ಬೇಡ. ಕೊರೊನಾ ವಾರಿಯರ್ಸ್ ನಮ್ಮನ್ನು ದೇವರಂತೆ ಬಂದು ರಕ್ಷಿಸುತ್ತಿದ್ದಾರೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ದೈಹಿಕ ಅಂತರ ಪಾಲನೆ ಮಾಡಬೇಕು. ರಾಜ್ಯದಲ್ಲಿ ಹೆಚ್ಚುತ್ತಿರುವ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿ ಮಾಡುವುದು ಉತ್ತಮ ಎಂದು ಹೇಳಿದರು.