ಬೆಂಗಳೂರು: ಪಡಿತರ ಅಕ್ಕಿ ಕೇಳಿದ ವ್ಯಕ್ತಿಯನ್ನು ಸಾಯುವಂತೆ ಹೇಳಿದ ಆಹಾರ ಸಚಿವ ಉಮೇಶ್ ಕತ್ತಿ ರಾಜೀನಾಮೆ ನೀಡಬೇಕೆಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಊಟಕ್ಕೆ ಅಕ್ಕಿ ಕೇಳಿದರೆ ಸಾಯಿ ಎಂದು ಹೇಳುವ ಇವರೆಂತಹ ಆಹಾರ ಸಚಿವರು? ಇದು ಬಿಜೆಪಿ ಸಂಸ್ಕೃತಿಯನ್ನು ತೋರುತ್ತದೆ. ಸಿಎಂ ಯಡಿಯೂರಪ್ಪನವರು ಮೊದಲು ಉಮೇಶ್ ಕತ್ತಿಯವರನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ 7 ಕೆ.ಜಿ ಅಕ್ಕಿ ಕೊಡುತ್ತಿದ್ದೆವು. ಇವರು 5 ಕೆ.ಜಿಗೆ ಇಳಿಸಿದರು. ಈಗ 2 ಕೆ.ಜಿ ಅಕ್ಕಿ ಕೊಡುತ್ತಿದ್ದಾರೆ. ಹೀಗಾದಾಗ ಬಡ ಜನರು ಕೇಳುತ್ತಾರೆ ಅದಕ್ಕೆ ಸಾಯಿ ಎನ್ನುವುದೇ? ಮಾನವೀಯತೆಯೂ ಇಲ್ಲದ ಸಚಿವರು ಸರ್ಕಾರ ನಮಗೆ ಬೇಕೆ? ಇನ್ನು ಒಂದು ವರ್ಷವಿರುತ್ತೀರೋ 6 ತಿಂಗಳು ಇರುತ್ತೀರೋ ಆಡಳಿತದ ಕೊನೇಗಾಲದಲ್ಲಾದರೂ ಒಳ್ಳೆಯ ಕೆಲಸ ಮಾಡಬಾರದೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ 14 ದಿನ ಲಾಕ್ ಡೌನ್: ರೈತರಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಮತ್ತೊಂದು ಗುಡ್ ನ್ಯೂಸ್
ಇದೇ ವೇಳೆ ರಾಜ್ಯ ಕಾಂಗ್ರೆಸ್ ಘಟಕ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಅಯೋಗ್ಯ ಸರ್ಕಾರ, ಅನರ್ಹ ಮಂತ್ರಿಗಳು, ಮಗನ ಕೈಗೊಂಬೆ ಮುಖ್ಯಮಂತ್ರಿ, ಪುಕ್ಕಲು ಸಂಸದರು, ತಿಕ್ಕಲು ಸಂಪುಟ! ಇಂತಹ ನಾಲಾಯಕ್ ಸರ್ಕಾರದಿಂದ ಜನತೆ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಟ್ವಿಟರ್ ನಲ್ಲಿ ಗುಡುಗಿದೆ.
ಜನತೆ ನೋವು, ಹತಾಶೆಯಿಂದ ಬದುಕಬೇಕೋ ಸಾಯಬೇಕೋ ಎಂದು ಕೇಳಿದರೆ. ಸಾಯುವುದನ್ನೇ ಆಯ್ಕೆ ಮಾಡಿಕೊಳ್ಳಿ ಎಂದಿದೆ ಬಿಜೆಪಿ ಸರ್ಕಾರ. ಇಂತಹ ಅತೀ ನೀಚ ಸರ್ಕಾರದಿಂದ ರಾಜ್ಯಕ್ಕೆ ಉಳಿಗಾಲವಿಲ್ಲ. ಮೊನ್ನೆ ಸ್ಮಶಾನ ವ್ಯವಸ್ಥೆ ಮಾಡಿದ್ದೇವೆ, ಅಂತ್ಯಕ್ರಿಯೆಗೆ ಸಮಸ್ಯೆ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದರು. ಇಂದು ಆಹಾರ ಸಚಿವರು ಸತ್ತು ಹೋಗಿ ಎನ್ನುತ್ತಿದ್ದಾರೆ. ಜನರನ್ನು ಸಾಯಲೆಂದೇ ಈ ಬಿಜೆಪಿ ಸರ್ಕಾರ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.