ಕೊರೊನಾ ಲಾಕ್ ಡೌನ್ ನಿಂದಾಗಿ ಕರ್ನಾಟಕವೂ ಸೇರಿದಂತೆ ದೇಶದ ಎಲ್ಲ ರಾಜ್ಯಗಳು ಸಹ ಸಂಕಷ್ಟಕ್ಕೊಳಗಾಗಿವೆ. ಹೀಗಾಗಿಯೇ ಸಹಜವಾಗಿ ಕೇಂದ್ರದಿಂದ ತಮಗೆ ಬರಬೇಕಾದ ಸರಕು ಮತ್ತು ಸೇವಾ ತೆರಿಗೆ GST)ಯ ಪಾಲಿನ ನಿರೀಕ್ಷೆಯಲ್ಲಿವೆ.
ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ, ಸರಕು ಮತ್ತು ಸೇವಾ ತೆರಿಗೆಯ ಪಾಲಿನ ಸ್ವಲ್ಪ ಹಣವನ್ನು ಎಲ್ಲ ರಾಜ್ಯಗಳಿಗೂ ವಿತರಿಸಿದೆ. ಆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹಣ ಬರುವುದು ಅನುಮಾನವೆಂದು ಹೇಳಲಾಗುತ್ತಿದೆ.
ಇದಕ್ಕೆ ಪೂರಕವೆಂಬಂತೆ ಕೇಂದ್ರ ಹಣಕಾಸು ಕಾರ್ಯದರ್ಶಿ ಅಜಯ ಭೂಷಣ ಪಾಂಡೆ, ಸಂಸದೀಯ ಸ್ಥಾಯಿ ಸಮಿತಿ ಸಭೆಗೆ ಮಾಹಿತಿಯನ್ನು ನೀಡಿದ್ದು, ಕೇಂದ್ರ ಸರ್ಕಾರವು ಆದಾಯ ಹಂಚಿಕೆ ಸೂತ್ರದಲ್ಲಿ ರಾಜ್ಯ ಸರ್ಕಾರಗಳಿಗೆ ಸರಕು ಮತ್ತು ಸೇವಾ ತೆರಿಗೆ ಹಂಚುವ ಪರಿಸ್ಥಿತಿಯಲ್ಲ ಇಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೆ ಆದಾಯ ಸಂಗ್ರಹ, ನಿರ್ದಿಷ್ಟ ಮಿತಿಗಿಂತ ಕಡಿಮೆಯಾದ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳಿಗೆ ಪರಿಹಾರ ಪಾವತಿ ಸ್ಥಗಿತಗೊಳಿಸುವ ಅವಕಾಶವನ್ನು ಕೇಂದ್ರ ಸರ್ಕಾರಕ್ಕಿದೆ ಎಂದು ಅವರು ತಿಳಿಸಿದ್ದು, ಹೀಗಾಗಿ ಸದ್ಯಕ್ಕೆ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಿಗೆ ಜಿ.ಎಸ್.ಟಿ. ಪಾಲು ಬರುವ ಸಾಧ್ಯತೆ ಇಲ್ಲ ಎನ್ನಲಾಗಿದೆ.