ಬೆಂಗಳೂರು: ರಾಜ್ಯದಲ್ಲಿ ಆಕ್ಸಿಜನ್, ಬೆಡ್ ಕೊರತೆಯಿಂದ ಜನರು ಪರದಾಡುತ್ತಿದ್ದಾರೆ. ಆದರೆ ಸರ್ಕಾರ, ಸಚಿವರು ಅಂತಹ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯದ ಆಸ್ಪತ್ರೆಗಳ ಬಗ್ಗೆ ರಿಯಾಲಿಟಿ ಚೆಕ್ ಮಾಡುವ ಅಗತ್ಯವಿದ್ದು, ಸ್ವತಃ ನಾನೇ ರಿಯಾಲಿಟಿ ಚೆಕ್ ಮಾಡಲು ಬರುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಆರೋಗ್ಯ ಸಚಿವರು ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಲು ಜನರೇ ಕಾರಣ ಎಂದು ಹೇಳುತ್ತಿದ್ದಾರೆ. ಹಾಗಾದರೆ ಆರೋಗ್ಯ ಸಚಿವರಾಗಿ ನೀವೇಕೆ ಇದ್ದೀರಿ? ಜನರಿಗೆ ಆಡಳಿತ ನಡೆಸಲು ಬಿಟ್ಟುಬಿಡಿ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ಕೊರೊನಾ ಪಾಸಿಟಿವ್
ನವೆಂಬರ್ ನಲ್ಲೇ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಕೊರೊನಾ ಸೋಂಕು ಹೆಚ್ಚಳವಾಗಲಿದೆ ಎಂದು ಎಚ್ಚರಿಕೆ ನೀಡಿತ್ತು. ಅಲ್ಲದೇ ಸೋಂಕು ನಿಯಂತ್ರಣಕ್ಕೆ 12 ಸಲಹೆಗಳನ್ನು ಕೂಡ ನೀಡಿತ್ತು. ಆದರೆ ಸರ್ಕಾರ ಯಾವೊಂದು ಕ್ರಮವನ್ನೂ ಕೈಗೊಂಡಿಲ್ಲ. ರಾಜ್ಯ ಸರ್ಕಾರ ಮೊದಲೇ ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದರೆ ಇಂದು ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಇದಕ್ಕೆ ಜನರು ಕಾರಣರಲ್ಲ ಬೇಜವಾಬ್ದಾರಿ ಆಡಳಿತಕ್ಕೆ ಸರ್ಕಾರವೇ ಹೊಣೆ ಎಂದು ಕಿಡಿಕಾರಿದರು.
ಇನ್ನು ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿ ಮಾಡುವುದು ಬೇಡ. ಹಿಂದೆ ಲಾಕ್ ಡೌನ್ ಆದಾಗ ಸರ್ಕಾರ ಏನು ಮಾಡಿದೆ? ಯಾವ ನೆರವು ನೀಡಿದೆ? ಫುಡ್ ಕಿಟ್, ಆರ್ಥಿಕ ನೆರವು ಏನಾದರೂ ಕೊಟ್ಟಿದೆಯೇ? ಈಗ ಮತ್ತೆ ಲಾಕ್ ಡೌನ್ ಮಾಡಿದರೆ ಜನರು ಏನು ಮಾಡಬೆಕು? ಇಷ್ಟಕ್ಕೂ ಸರ್ಕಾರ ಯಾವ ಸಿದ್ಧತೆ ಮಾಡಿಕೊಂಡಿದೆ? ಎಂದು ಪ್ರಶ್ನಿಸಿದ್ದಾರೆ.