ಮೈಸೂರು: ಕೊರೊನಾ ವಾರಿಯರ್ ಆಗಿದ್ದ ನಂಜನಗೂಡು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂ. ಪರಿಹಾರ ಘೋಷಿಸಿದೆ.
ಆತ್ಮಹತ್ಯೆಗೆ ಶರಣಾಗಿದ್ದ ನಂಜನಗೂಡಿನ ಆರೋಗ್ಯಾಧಿಕಾರಿ ನಾಗೇಂದ್ರ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಧನ ಹಾಗೂ ಮೃತರ ಪತ್ನಿಗೆ ಸಬ್ ರಿಜಿಸ್ಟ್ರಾರ್ ಉದ್ಯೋಗವನ್ನು ನೀಡಲು ಒಪ್ಪಿಗೆ ಸೂಚಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ನೀಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಅಲ್ಲದೇ ಪ್ರಕರಣದ ಸಂಪೂರ್ಣ ತನಿಖೆಯನ್ನು ನಡೆಸಿ 7 ದಿನಗಳ ಒಳಗೆ ವರದಿ ನೀಡುವಂತೆ ಮೈಸೂರಿನ ಪ್ರಾದೇಶಿಕ ಆಯುಕ್ತರ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ನಂಜನಗೂಡು ಆರೋಗ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ನಾಗೇಂದ್ರ ಆ.20 ರಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಮೇಲಾಧಿಕಾರಿ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ.