ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಬಿಪಿಎಲ್ – ಎಪಿಎಲ್ ಕಾರ್ಡ್ ಹೊಂದಿದವರು ಆರೋಗ್ಯ ರಕ್ಷಣೆ ಪಡೆಯಬಹುದಾಗಿದೆ.
‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ಕಾರ್ಡ್ ಹೊಂದಿದ ಬಿಪಿಎಲ್ ಕುಟುಂಬಗಳಿಗೆ ಒಂದು ವರ್ಷಕ್ಕೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ದೊರೆಯಲಿದ್ದು, ಎಪಿಎಲ್ ಕುಟುಂಬಗಳಿಗೆ ಶೇಕಡಾ 30ರಷ್ಟು ಅಥವಾ 1.50 ಲಕ್ಷ ರೂಪಾಯಿಗಳ ಚಿಕಿತ್ಸಾ ನೆರವು ಸಿಗಲಿದೆ. ಸರ್ಕಾರಿ ಕೋಟಾದಲ್ಲಿ ಚಿಕಿತ್ಸೆ ಪಡೆಯುವ ಕೋವಿಡ್ ರೋಗಿಗಳಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
ಕಾರ್ಡ್ ಹೊಂದಿದವರು ಕಾಯಿಲೆ ಬಂದಾಗ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಲಭ್ಯವಿರುವ ಚಿಕಿತ್ಸೆಗಳನ್ನು ಅಲ್ಲಿಯೇ ನೀಡಲಾಗುತ್ತದೆ. ಒಂದೊಮ್ಮೆ ಚಿಕಿತ್ಸೆ ಲಭ್ಯವಾಗದಿದ್ದ ಪಕ್ಷದಲ್ಲಿ ರೆಫರಲ್ ಪಡೆದುಕೊಂಡು ರೋಗಿ ತಾನು ಇಚ್ಚಿಸುವ ನೋಂದಾಯಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ಪಡಿತರ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹೊಂದಿದವರು ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ಕಾರ್ಡ್ ಪಡೆಯಲು ಅರ್ಹರಾಗಿದ್ದು, ಸುಮಾರು 169 ತುರ್ತು ಚಿಕಿತ್ಸೆಗಳಿಗೆ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.