ಸಚಿವ ಸಿ.ಟಿ. ರವಿಯವರಿಗೆ ಮೊದಲು ಕೊರೊನಾ ಟೆಸ್ಟ್ ಮಾಡಿದ ವೇಳೆ ನೆಗೆಟಿವ್ ಬಂದಿತ್ತು. ಆ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಲಾಗಿದ್ದು ಆ ಸಂದರ್ಭದಲ್ಲಿ ಪಾಸಿಟಿವ್ ಬಂದಿತ್ತು. ಹೀಗಾಗಿ ಮೂರನೇ ಬಾರಿ ಪರೀಕ್ಷೆ ಮಾಡಿಸಿಕೊಂಡಿದ್ದ ಸಿ.ಟಿ. ರವಿ, ಥರ್ಡ್ ಅಂಪೈರ್ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದ್ದರು.
ಮೂರನೇ ಬಾರಿಯ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಅವರು ಚಿಕ್ಕಮಗಳೂರಿನ ತಮ್ಮ ತೋಟದ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು. ಇದೀಗ ಮತ್ತೊಮ್ಮೆ ಕೊರೊನಾ ಟೆಸ್ಟ್ ಮಾಡಿಸಿದ ವೇಳೆ ಸಿ.ಟಿ. ರವಿ ಅವರಿಗೆ ನೆಗೆಟಿವ್ ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಕೊರೊನಾ ಕುರಿತಂತೆ ಯಾವುದೇ ಭಯ ಬೇಡ. ನಾನು ಆಯುರ್ವೇದ ವೈದ್ಯ ಬಾ. ಗಿರಿಧರ ಕಜೆ ಅವರು ನೀಡಿದ ಮಾತ್ರೆಗಳನ್ನು ಒಟ್ಟು ಹತ್ತು ದಿನ ಸೇವಿಸಿದ್ದೇನೆ. ಜೊತೆಗೆ ಬೆಳಿಗ್ಗೆ ಹಾಗೂ ಸಂಜೆ ನೆಲ ನಲ್ಲಿ ಅಥವಾ ಅಮೃತಬಳ್ಳಿಯ ಕಷಾಯ ಕುಡಿಯುತ್ತಿದ್ದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಔಷಧ – ಮಾತ್ರೆ ತೆಗೆದುಕೊಂಡಿಲ್ಲ. ಆದರೆ ಪ್ರತಿನಿತ್ಯ ನೀರನ್ನು ಚೆನ್ನಾಗಿ ಕುಡಿಯುತ್ತಿದ್ದೆ ಎಂದಿದ್ದಾರೆ. ಹಾಗೆ ವಾಕಿಂಗ್ – ಯೋಗಾಸನ ಮಾಡುತ್ತಿದ್ದೆ ಎಂದು ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ.