ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಲಿದ್ದ ಭಾರಿ ಆಕ್ಸಿಜನ್ ದುರಂತವೊಂದು ಸ್ವಲ್ಪದರಲ್ಲಿ ತಪ್ಪಿದಂತಾಗಿದೆ. ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ 200 ಸೋಂಕಿತರ ಜೀವ ಉಳಿದಿದೆ.
ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 200 ರೋಗಿಗಳು ರಾತ್ರಿ ಆಕ್ಸಿಜನ್ ಕೊರತೆಯಿಂದ ಪರದಾಡಿದ್ದಾರೆ. ಅದೃಷ್ಟವಶಾತ್ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿ 11 ಗಂಟೆ ವೇಳೆಗೆ ಬಳ್ಳಾರಿಯ ಪ್ರಾಕ್ಸಿ ಏರ್ ಕಂಪನಿಯಿಂದ ಆಸ್ಪತ್ರೆಗೆ ಆಕ್ಸಿಜನ್ ಟ್ಯಾಂಕರ್ ಬರಬೇಕಿತ್ತು. ಆದರೆ ಕೆ.ಸಿ. ಜನರಲ್ ಆಸ್ಪತ್ರೆಗೆ ಬರುವ ಬದಲು ಬೇರೊಂದು ಖಾಸಗಿ ಆಸ್ಪತ್ರೆಗೆ ಆಕ್ಸಿಜನ್ ಟ್ಯಾಂಕರ್ ಹೋಗಿದೆ. ಇದರಿಂದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ವೈದ್ಯಾಧಿಕಾರಿ ಡಾ.ರೇಣುಕಾ ಪ್ರಸಾದ್ ಪ್ರಾಕ್ಸಿ ಕಂಪನಿ ಸಂಪರ್ಕಿಸಿದ್ದಾರೆ, ಆದರೆ ಏನೂ ಪ್ರಯೋಜನವಾಗಿಲ್ಲ. ಬೇರೆ ದಾರಿ ಕಾಣದೇ ತಕ್ಷಣ ಡಿಸಿಎಂ ಅಶ್ವತ್ಥನಾರಾಯಣ ಅವರನ್ನು ಸಂಪರ್ಕಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಡಿಸಿಎಂ ಆಕ್ಸಿಜನ್ ಎಲ್ಲಿ ಲಭ್ಯವಿದೆ ಎಲ್ಲಾ ಕಡೆ ಕ್ಷಿಪ್ರವಾಗಿ ವಿಚಾರಿಸಿದ್ದಾರೆ. ಅಂತಿಮವಾಗಿ ಯುನಿವರ್ಸಲ್ ಕಂಪನಿ ಜೊತೆ ಚರ್ಚಿಸಿ ಕೆ.ಸಿ.ಜನರಲ್ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಿದ್ದಾರೆ. ಮುಂಜಾನೆ ವೇಳೆಗೆ ಆಸ್ಪತ್ರೆಗೆ 20 ಜಂಬೋ ಸಿಲಿಂಡರ್ ಗಳು ಬಂದು ತಲುಪಿದ್ದು, 200 ರೋಗಿಗಳ ಪ್ರಾಣ ಉಳಿದಿದೆ. ಆಸ್ಪತ್ರೆ ಸಿಬ್ಬಂದಿಗಳು ನಿಟ್ಟುಸಿರುಬಿಟ್ಟಿದ್ದಾರೆ.