ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಶಾಲಾ – ಕಾಲೇಜುಗಳು ಕಳೆದ ಎರಡೂವರೆ ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿದೆ. ಹೀಗಾಗಿ ಆನ್ಲೈನ್ ಶಿಕ್ಷಣಕ್ಕೆ ಪ್ರಾಮುಖ್ಯತೆ ಬಂದಿದ್ದು, ಈ ಕುರಿತು ಬುಧವಾರದಂದು ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿತ್ತು.
ಚಿಕ್ಕ ಮಕ್ಕಳಿಗೆ ಆನ್ ಲೈನ್ ಶಿಕ್ಷಣದಿಂದ ಒತ್ತಡ ಹೇರಿದಂತಾಗುತ್ತದೆ ಎಂಬ ಕಾರಣಕ್ಕೆ ಎಲ್.ಕೆ.ಜಿ. ಯಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡುವುದಕ್ಕೆ ನಿಷೇಧ ಹೇರಲಾಗಿತ್ತು. ಅಲ್ಲದೆ ಆನ್ ಲೈನ್ ಶಿಕ್ಷಣದ ಹೆಸರಿನಲ್ಲಿ ಖಾಸಗಿ ಶಾಲೆಗಳು ಶುಲ್ಕ ವಸೂಲಿ ಮಾಡುವುದನ್ನು ನಿರ್ಬಂಧಿಸಲಾಗಿತ್ತು.
ಇದೀಗ ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆನ್ಲೈನ್ ಶಿಕ್ಷಣದ ಕುರಿತು ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಬುಧವಾರದ ಆದೇಶವನ್ನು ಪರಿಷ್ಕರಣೆ ಮಾಡಲಾಗಿದೆ. ಎಲ್ಕೆಜಿ – ಯುಕೆಜಿ ಸೇರಿದಂತೆ 7 ನೇ ತರಗತಿವರೆಗಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣವನ್ನು ನೀಡುವಂತಿಲ್ಲ ಎಂದು ತಿಳಿಸಲಾಗಿದೆ.