ಬೆಂಗಳೂರು: ನನ್ನ ಕಸೀನ್ ಬ್ರದರ್ ಮದುವೆಗೆ ಹೋಗಿದ್ದಾಗ ಊಟದಲ್ಲಿ ವ್ಯತ್ಯಾಸವಾಗಿ ನನಗೆ ಸ್ವಲ್ಪ ಅಜೀರ್ಣವಾಗಿತ್ತು. ಅದಕ್ಕೆ ಮಾತ್ರೆ ನುಂಗಿದ್ದೆ. ಅದರಿಂದ ಡೋಸೆಜ್ ಹೆಚ್ಚಿ ಡ್ರೌಸಿನೆಸ್ ಬಂದಿದೆ ಹೊರತು ಆತ್ಮಹತ್ಯೆಗೆ ಯತ್ನಿಸಿಲ್ಲ. ಅಂತಹ ವ್ಯಕ್ತಿ ನಾನಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ತಿಳಿಸಿದ್ದಾರೆ.
ಎಂ.ಎಸ್.ರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಆರ್. ಸಂತೋಷ್, ನನಗೆ ಯಾವುದೇ ಒತ್ತಡವಿಲ್ಲ. ರಾಜಕೀಯ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ನನಗಿದೆ. ಅಜೀರ್ಣದಿಂದ ನಿದ್ದೆ ಸರಿಬಂದಿರಲಿಲ್ಲ. ನಿದ್ದೆ ಬಾರದಿದ್ದಾಗ ನಿದ್ದೆ ಮಾತ್ರೆಯನ್ನು ಸೇವಿಸುತ್ತೇನೆ. ಮೊನ್ನೆ ರಾತ್ರಿ ಅರ್ಧ ಮಾತ್ರೆ ಸೇವಿಸುವ ಬದಲು ಒಂದು ಮಾತ್ರೆ ಸೇವಿಸಿದ್ದೆ. ಹಾಗಾಗಿ ಡ್ರೌಸಿನೆಸ್ ಹೆಚ್ಚಾಗಿ ಪತ್ನಿ ಆತಂಕಗೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೊಂದು ಅಚಾತುರ್ಯ. ಆಕಸ್ಮಿಕವಾಗಿ ಈ ಘಟನೆ ನಡೆದಿದೆ ಹೊರತು ಆತ್ಮಹತ್ಯೆಯಂತಹ ಯೋಚನೆ ಮಾಡುವವನು ನಾನಲ್ಲ ಎಂದರು.
12 ನಿದ್ದೆ ಮಾತ್ರೆ ಸೇವಿಸಿದ್ದೆ ಎಂಬುದು ಸುಳ್ಳು. ಎಫ್ಐಆರ್ ನಲ್ಲಿ ಅಂತಹ ಯಾವುದೇ ಉಲ್ಲೇಖವಿಲ್ಲ. ಇನ್ನು ಡಿ.ಕೆ. ಶಿವಕುಮಾರ್ ಮಾಡುತ್ತಿರುವ ಆರೋಪ ಕಪೋಲಕಲ್ಪಿತ. ಸೋಲಿನ ಹತಾಶೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅನಗತ್ಯ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.