alex Certify ಆತ್ಮಸಾಕ್ಷಿಯನ್ನೇ ಮಾರಾಟ ಮಾಡಿಕೊಂಡಿರುವ ಬಿಜೆಪಿ ನಾಯಕರಿಗೆ ಮೆದುಳು, ಹೃದಯ ಇರಬೇಕಾದ ಜಾಗದಲ್ಲಿವೆಯೇ….? ಸಿದ್ದರಾಮಯ್ಯ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮಸಾಕ್ಷಿಯನ್ನೇ ಮಾರಾಟ ಮಾಡಿಕೊಂಡಿರುವ ಬಿಜೆಪಿ ನಾಯಕರಿಗೆ ಮೆದುಳು, ಹೃದಯ ಇರಬೇಕಾದ ಜಾಗದಲ್ಲಿವೆಯೇ….? ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಈಗ ಲಸಿಕೆಯನ್ನೂ ಸಮರ್ಪಕವಾಗಿ ಹಂಚಲಾಗದೇ ಜನರನ್ನು ಸಾವಿನ ಮನೆಗೆ ತಳ್ಳಿ ಅಪರಾಧಿ ಸ್ಥಾನಗಳಲ್ಲಿ ನಿಂತಿವೆ. ಕೋವಿಡ್ ಲಸಿಕೆ ಬಗ್ಗೆ ಜನರಿಗೆ ವಸ್ತುಸ್ಥಿತಿ ತಿಳಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ರಾಜ್ಯದ ಜನತೆಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ದೇಶದ ಮಕ್ಕಳಿಗೆ ಲಸಿಕೆ ನಿರಾಕರಿಸಿ ಲಕ್ಷಾಂತರ ಜನರನ್ನು ಕೊಂದ ಕೊಲೆಗಾರ ಕೇಂದ್ರ ಸರ್ಕಾರ. ಸ್ವತಃ ಅಪರಾಧಿ ಸ್ಥಾನದಲ್ಲಿ ನಿಂತಿರುವ ಬಿಜೆಪಿ ನಾಯಕರು ಈಗ ದೇಶದ ನಾಗರಿಕರಿಗೆ ಲಸಿಕೆಯ ಕುರಿತು ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡಿದರು, ಅದಕ್ಕಾಗಿ ಜನ ಲಸಿಕೆ ಹಾಕಿಸಿಕೊಳ್ಳಲಿಲ್ಲ ಎಂದು ಹೇಳಿಕೆ ನೀಡುತ್ತಾ ನಿಜ ಸಂಗತಿ ಮರೆಮಾಚಿ ಸುಳ್ಳು ಹಂಚಲು ಆರಂಭಿಸಿದ್ದಾರೆ. ಲಸಿಕೆ ಬಗ್ಗೆ ವಿಪಕ್ಷಗಳು ಉತ್ತರಿಸಬೇಕಿಲ್ಲ, ಆಡಳಿತ ನಡೆಸುವ ಬಿಜೆಪಿ ಸರ್ಕಾರ ದೇಶದ ಜನರಿಗೆ ಉತ್ತರಿಸಬೇಕಾಗಿದೆ. ದೇಶದ ಜನ ಕೇಳುತ್ತಿರುವ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

1. ವಿಶ್ವ ಆರೋಗ್ಯ ಸಂಸ್ಥೆಯು ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿಯೇ, ಭಾರತದಲ್ಲಿ ರೂಪಾಂತರ ಹೊಂದಿದ ಮಾರಣಾಂತಿಕ ಕೊರೋನ ವೈರಸ್ ತಳಿ ಬಿ.1.617 ಪತ್ತೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಭಾರಿ ಹಾನಿ ಮಾಡಬಹುದು ಎಂದು ಹೇಳಿರಲಿಲ್ಲವೆ? ಅದನ್ನು ಕೇಂದ್ರ ಸರ್ಕಾರ ಏಕೆ ನಿರ್ಲಕ್ಷಿಸಿತು? ಸಮರ್ಪಕ ಸಿದ್ಧತೆಗಳನ್ನು ಏಕೆ ಮಾಡಿಕೊಳ್ಳಲಿಲ್ಲ?

2. ನಮ್ಮ ದೇಶದ, ವಿಶ್ವದ ವೈರಾಣು ತಜ್ಞರು ಫೆಬ್ರವರಿ, ಮಾರ್ಚ್ ವೇಳೆಗೆ ಭೀಕರ ಮಾರಣಾಂತಿಕವಾಗುವ ಕೊರೋನಾದ ಎರಡನೇ ಅಲೆ ಭಾರತಕ್ಕೆ ಬರುತ್ತದೆ ಎಂದು ಹೇಳಿರಲಿಲ್ಲವೆ?

3. ಬಿಜೆಪಿಯವರಿಗೆ ಆತ್ಮ ಸಾಕ್ಷಿ ಇದ್ದರೆ ಒಮ್ಮೆ ಮುಟ್ಟಿ ನೋಡಿಕೊಳ್ಳಬೇಕು.ಈ ದೇಶದ ಪ್ರಧಾನ ಮಂತ್ರಿಯವರು 28-1-2021 ರಂದು ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾರತವು ಕೊರೋನ ವಿರುದ್ಧ ಏಕಾಂಗಿಯಾಗಿ ಜಯ ಸಾಧಿಸಿದೆ ಎಂದು ಹೇಳಲಿಲ್ಲವೆ? ಪ್ರಧಾನಿಯವರು ಹಾಗೆ ಹೇಳಬೇಕಾದರೆ, ಅವರಿಗೆ ಯಾವ ವಿಜ್ಞಾನಿ, ಯಾವ ವೈರಾಣು ತಜ್ಞರು ವರದಿ ನೀಡಿದ್ದರು ಎಂಬುದನ್ನು ದೇಶದ ಜನರಿಗೆ ತಿಳಿಸಬೇಕಲ್ಲವೆ?

4. ಪಾರ್ಲಿಮೆಂಟಿನಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿಯವರು ಜಗತ್ತಿನ ಯಾವ ದೇಶವೂ ಕೊರೋನ ವಿರುದ್ಧ ಜಯ ಸಾಧಿಸಿಲ್ಲ. ಆದರೆ ನಾವು ಏಕಾಂಗಿಯಾಗಿ ಅದೃಶ್ಯ ಶತ್ರುವಾದ ಕೊರೋನ ವಿರುದ್ಧ ಹೋರಾಟ ಮಾಡಿ ಜಯ ಸಾಧಿಸಿದ್ದೇವೆ ಎಂದು ಹೇಳಿದಾಗ ಬಿಜೆಪಿಯ ಸಚಿವರುಗಳು, ಸಂಸದರುಗಳು ಮೇಜು ಕುಟ್ಟಿ ಸಂಭ್ರಮಿಸಲಿಲ್ಲವೆ? ಹಾಗೆ ಮೇಜು ಕುಟ್ಟಿ ಸಂಭ್ರಮಿಸಿದವರಲ್ಲಿ ಕರ್ನಾಟಕದಿಂದ ಆರಿಸಿ ಹೋದ ಸಚಿವರು ಪ್ರಧಾನಿಯವರ ಹಿಂದೆಯೇ ಕೂತಿರುವುದನ್ನು ಜನರು ನೋಡಿಲ್ಲವೆ?ಅದೇ ಸಚಿವರೆ ಈಗ ಮುಂದೆ ನಿಂತು ಕಾಂಗ್ರೆಸಿನ ನಾಯಕರನ್ನು ನಿಂದಿಸುತ್ತಾ ಕೂತಿದ್ದಾರೆ, ಇವರು ಆತ್ಮಸಾಕ್ಷಿಯನ್ನು ಮಾರಾಟ ಮಾಡಿ ಎಷ್ಟು ದಿನವಾಯಿತು? ಇವರಿಗೆ ಮೆದುಳು, ಹೃದಯ ಇವೆಲ್ಲಿರಬೇಕಾದ ಜಾಗದಲ್ಲಿ ಇವೆಯೆ?

5. ದೇಶದ ಜನರನ್ನು ದಾರಿ ತಪ್ಪಿಸಿ ಕ್ರೂರ ಕೊರೋನಾದ ಬಾಯಿಗೆ ದೂಡಿದವರು ಬಿಜೆಪಿಯವರಲ್ಲವೆ? ಕೊರೋನಾ ವಿರುದ್ಧ ಗೆಲುವು ಸಾಧಿಸಿದ್ದೇವೆ ಎಂದು ಪ್ರಧಾನಿಯವರು ಕೇವಲ ಒಂದೆರಡು ಬಾರಿ ಹೇಳಿದ್ದಲ್ಲ. ಜನವರಿ, ಫೆಬ್ರವರಿ ತಿಂಗಳಲ್ಲಿ ಹತ್ತಾರು ಬಾರಿ ಹೇಳಿದ್ದಾರೆ. ಅದಕ್ಕೆ ರಾಶಿ ರಾಶಿ ದಾಖಲೆಗಳಿವೆ ವಿವೇಕವಂತರು, ಬುದ್ಧಿವಂತರು ಅವರ ಹೇಳಿಕೆಗಳನ್ನು ಪರಿಶೀಲಿಸಬಹುದು. ಹಾಗೆ ಪರಿಶೀಲಿಸಿ ಅಜ್ಞಾನದ, ಅವಿವೇಕದ ಆರಾಧಕರಿಗೆ ತಿಳಿಸಿ ಹೇಳಬೇಕಾಗಿದೆ.

6. ಈ ದೇಶದ ಜನರ ಆರೋಗ್ಯದ ರಕ್ಷಣೆಯನ್ನು ನೋಡಿಕೊಳ್ಳಬೇಕಾದ ಆರೋಗ್ಯ ಸಚಿವರು 16-1-2021 ರಂದು ದೇಶ ಕೊರೋನಾದ ವಿರುದ್ಧ ಜಯಸಾಧಿಸುವ ಹಂತಕ್ಕೆ ಬಂದಿದೆ ಎಂದು ಹೇಳಿರಲಿಲ್ಲವೆ? ಇದೇ ಸಚಿವರು ದಿನಾಂಕ 14-3-2021 ರಂದು ಆಲ್ ಇಂಡಿಯಾ ಮೆಡಿಕಲ್ ಸೈನ್ಸ್ ಸಂಸ್ಥೆಯಲ್ಲಿ [ಏಮ್ಸ್ ನಲ್ಲಿ] ಮಾಡಿದ ಭಾಷಣದಲ್ಲಿ “ ಭಾರತವು ಕೋವಿಡ್ ವಿರುದ್ಧದ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದ್ದು ಸುಳ್ಳೆ?

7. ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಅಸ್ಸಾಂನಲ್ಲಿ ಕೊರೋನಾ ಇಲ್ಲ ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಹೇಳಿದ್ದು ಸುಳ್ಳೆ?

8. ಕುಂಭಮೇಳ ನಡೆಸಿದರೆ ಕೊರೋನಾ ಬರುವುದಿಲ್ಲ ಎಂದು ಉತ್ತರಾಖಂಡ್‍ನ ಮುಖ್ಯಮಂತ್ರಿ ಹೇಳಿರಲಿಲ್ಲವೆ? ಪ್ರಧಾನಿಗಳು ಮತ್ತಿತರ ಕೇಂದ್ರ ಸಚಿವರು ಚುನಾವಣಾ ರ್ಯಾಲಿಗಳಲ್ಲಿ ಸೇರುತ್ತಿದ್ದ ಜನಸ್ತೋಮವನ್ನು ನೋಡಿ ಏನೇನು ಮಾತನಾಡಿದ್ದಾರೆಂದು ದೇಶದ ಬುದ್ಧಿವಂತ ಜನ ಮರೆಯಲು ಸಾಧ್ಯವೆ?

9. ಕೊರೋನಾವನ್ನು ಸೋಲಿಸಿ ದೇಶ ಗೆದ್ದುಬಿಟ್ಟಿತು ಎಂದು ಪ್ರಧಾನಿಯವರೇ ಜನವರಿಯಿಂದ ಹೇಳುತ್ತಾ ಬಂದ ಮೇಲೆ ಜನ ವ್ಯಾಕ್ಸಿನ್ ಯಾಕೆ? ಮಾಸ್ಕ್ ಯಾಕೆ? ಸ್ಯಾನಿಟೈಸರ್ ಯಾಕೆ? ಎಂಬ ನಿಲುವಿಗೆ ಬಂದದ್ದು ಸುಳ್ಳೆ? ಹಾಗಿದ್ದರೆ ಜನ ಮೋಸ ಹೋಗಲು ಕಾರಣ ಯಾರು?

10. ದೇಶದಲ್ಲಿ ಕೇವಲ ಕೊರೋನಾ ವಿಕೋಪ ಇಲ್ಲ. ರಾಜಕೀಯ ವೈಫಲ್ಯ…..ಜಗತ್ತಿನ ಅನೇಕ ದೇಶಗಳು ಕೊರೋನವನ್ನು ಸಮರ್ಥವಾಗಿ ನಿಭಾಯಿಸಿವೆ. ಆದರೆ ನಮ್ಮಲ್ಲಿ ರಾಜಕೀಯ ವೈಫಲ್ಯದ ಕಾರಣ ಜನ ತಬ್ಬಲಿಗಳಾಗುತ್ತಿದ್ದಾರೆ ಅಲ್ಲವೆ?

11. ವಿಜ್ಞಾನಿಗಳು ಎರಡನೇ ಅಲೆ ಬರುತ್ತದೆ ಎಂದು ಹೇಳಿದ್ದರು. ಅದೇ ವೇಳೆ ವಿಶ್ವದ ಅನೇಕ ದೇಶಗಳು ಎರಡನೇ ಅಲೆಯಿಂದ ತತ್ತರಿಸುತ್ತಿದ್ದವು. ಅವುಗಳಿಂದಲೂ ಬುದ್ಧಿ ಕಲಿಯದ ಸರ್ಕಾರ ಮೊದಲ ಅಲೆಯಲ್ಲಿ ತತ್ತರಿಸಿಹೋಗಿದ್ದ ದೇಶಗಳು ತನ್ನ ದೇಶದ ವಿಜ್ಞಾನಿಗಳ, ತಜ್ಞರ ಮಾತು ಕೇಳಿ ತೀವ್ರ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು, ಲಸಿಕೆಗಳನ್ನು ಹಾಕಿಸಿ ತಮ್ಮ ತಮ್ಮ ದೇಶಗಳ ಜನರನ್ನು ರಕ್ಷಿಸಿಕೊಂಡವು. ನಮ್ಮಲ್ಲಿ ಆಡಳಿತ ನಡೆಸುವವರ ಅರಾಜಕತೆ, ಸರ್ವಾಧಿಕಾರಿ ಧೋರಣೆಯ ತೀರ್ಮಾನಗಳಿಂದ ಜನ ಮರಣ ಹೊಂದುವ ಪರಿಸ್ಥಿತಿ ಬಂದಿದೆ.

12. ಭಾರತವು ಜಗತ್ತಿನಲ್ಲಿಯೇ ಅತಿ ಹೆಚ್ಚು ವ್ಯಾಕ್ಸಿನ್ ತಯಾರಿಸುವ ದೇಶ. ಭಾರತವು ಕಳೆದ 70 ವರ್ಷಗಳಿಂದ ಸಾಧಿಸಿದ ಸಾಧನೆ ಇದು. ಇದರಿಂದಾಗಿಯೇ ದೇಶದ ಜನರಿಗೆ ಅತ್ಯಂತ ಉದಾತ್ತವಾಗಿ ಮತ್ತು ಉಚಿತವಾಗಿ ಸಿಡುಬು, ದಡಾರ, ಪೋಲಿಯೋ ಮುಂತಾದ ಲಸಿಕೆಗಳನ್ನು ಮನೆ ಮನೆಗೆ ತೆರಳಿ ಆಂದೋಲನದ ಮಾದರಿಯಲ್ಲಿ ನೀಡಿ ಭಾರತವನ್ನು ರಕ್ಷಿಸಲು ಸಾಧ್ಯವಾಯಿತು. ಒಂದು ಅಂದಾಜಿನ ಪ್ರಕಾರ ಸೆರಂ ಔಷಧ ತಯಾರಿಕಾ ಸಂಸ್ಥೆಯೊಂದೇ ವರ್ಷಕ್ಕೆ ಸುಮಾರು 150 ಕೋಟಿ ಡೋಸ್ ವಿವಿಧ ಲಸಿಕೆಗಳನ್ನು ತಯಾರಿಸುತ್ತಿದೆ. ಈ ಸಂಸ್ಥೆಯ ಮುಖ್ಯಸ್ಥರಾದ ಆದಾರ್ ಪೂನಾವಾಲ ಹೇಳಿರುವಂತೆ ಭಾರತವು ಲಸಿಕೆ ಉತ್ಪಾದನೆಗೆ ಮತ್ತು ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸೂಕ್ತ ಒಪ್ಪಂದಗಳನ್ನು ಮಾಡಿಕೊಳ್ಳಲಿಲ್ಲ. ಲಸಿಕೆ ಪೂರೈಸಲು ಆದೇಶಗಳನ್ನು ನೀಡಲಿಲ್ಲ.‌ ಜನವರಿಯ ಹೊತ್ತಿಗೆ ದೇಶದಲ್ಲಿ ಕೊರೋನಾ ಇಳಿಮುಖವಾಗುತ್ತಿದೆಯೆಂದು ಭಾಸವಾದ ಕೂಡಲೇ ಆಡಳಿತ ನಡೆಸುತ್ತಿರುವವರು ಲಸಿಕೆ ವಿಚಾರದಲ್ಲಿ ಅಷ್ಟೊಂದು ಉತ್ಸಾಹ ತೋರಿಸಲಿಲ್ಲ. ಅದಕ್ಕಾಗಿ ಈ ಸಮಸ್ಯೆ ಪ್ರಾರಂಭವಾಯಿತೆಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಅಂದಮೇಲೆ ಜನರ ಸಾವಿನ ಹೊಣೆಯನ್ನು ಯಾರು ಹೊರಬೇಕು?ಶಿಕ್ಷೆಗೆ ಯಾರು ಅರ್ಹರು?

13. ದೇಶವು ಜನವರಿಯಲ್ಲಿ ಸುಮಾರು 1 ಕೋಟಿ 65 ಲಕ್ಷ ಲಸಿಕೆಗಳಿಗೆ ಆದೇಶ ನೀಡಿತು ಆಗ ಸೆರಂ ಸಂಸ್ಥೆ ನಿಗಧಿ ಮಾಡಿದ್ದ ದರ ಒಂದು ಲಸಿಕೆಗೆ 210 ರೂಪಾಯಿ. ಏಪ್ರಿಲ್ ತಿಂಗಳಲ್ಲೇ 300 ರೂ. ನಿಗದಿಮಾಡಲಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ 900 ರೂ.ಗಳಿಗೂ ಅಧಿಕ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಬೇಡಿಕೆಯನ್ನು ಆಧರಿಸಿ ಬೆಲೆಯನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಹಾಗಿದ್ದರೆ ಕೇಂದ್ರ ಸರ್ಕಾರ ಜನರ ಹಿತಕ್ಕಾಗಿ ಅಡಳಿತ ನಡೆಸುತ್ತಿದೆಯೋ ಅಥವಾ ಜನರ ಕಗ್ಗೊಲೆ ನಡೆಯುತ್ತಿದ್ದರೂ ಅದನ್ನು ನಿರ್ಲಕ್ಷಿಸಿ ಅಂಗಡಿ ತೆರೆದುಕೊಂಡು ಕೂತಿದೆಯೋ?

14. ಬೆಲೆ ಏರಿಕೆಗೆ ಸಂಬಂಧಿಸಿದಂತೆ ಆದಾರ್ ಪೂನಾವಾಲ ತಾನು ಶೇ.50 ರಷ್ಟು ರಾಯಲ್ಟಿಯನ್ನು ಆಸ್ಟ್ರಝನೇಕ ಕಂಪೆನಿಗೆ ನೀಡುತ್ತಿದ್ದೇನೆಂದು ಹೇಳಿಕೊಂಡದ್ದಿದೆ. ಆದರೆ ಕೆ.ವಿ. ಬಾಲಸುಬ್ರಹ್ಮಣ್ಯಂ ಎಂಬ ಭಾರತದ ಇಮ್ಯುನಾಲಜಿಸ್ಟ್ ಹೇಳುವ ಪ್ರಕಾರ ರಾಯಲ್ಟಿಯ ಪ್ರಮಾಣ ಶೇ.5 ರಿಂದ 10 ರಷ್ಟಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಇದೇ ತಜ್ಞರ ಪ್ರಕಾರ ಕೋವಿಶೀಲ್ಡ್ ಲಸಿಕೆಯ ಬೆಲೆ ಕೇವಲ 30 ರೂ.ಗಳಷ್ಟಾಗಬಹುದು ಎಂದಿದೆ.

15. ಇದೇ ಪೂನಾವಾಲ ವ್ಯಾಕ್ಸಿನ್ ಉತ್ಪಾದಿಸಲು ಹಣ ಬಿಡುಗಡೆಗೆ ಒತ್ತಾಯ ಮಾಡಿದ್ದು ನಿಜ ಅಲ್ಲವೆ? ಮಾತೆತ್ತಿದರೆ ಕನಿಷ್ಟ ಸರ್ಕಾರ, ಗರಿಷ್ಟ ಆಡಳಿತ ಎಂದು ಹೇಳುವ ಕೇಂದ್ರ ಸರ್ಕಾರದಿಂದ ಒಬ್ಬ ಕಾರ್ಪೊರೇಟ್ ಔಷಧಗಳ ಉದ್ಯಮಿಯನ್ನು ನಿಭಾಯಿಸಲಾಗಲಿಲ್ಲ. ಮೊದಲು ಹಣ ನೀಡಲು ನಿರಾಕರಿಸಿ ನಂತರ ಹಣ ಬಿಡುಗಡೆ ಮಾಡಿದ್ದು ನಿಜವಲ್ಲವೆ?

ಇನ್ಮುಂದೆ ಬೆಂಗಳೂರಿನಲ್ಲಿ ಮನೆ ಮನೆಗಳಲ್ಲಿ ಕೋವಿಡ್ ಟೆಸ್ಟ್

16. ಲಸಿಕೆಗಳ ಬೆಲೆಯ ಕುರಿತು ಕಂಪೆನಿಗಳೇ ನಿರ್ಧರಿಸಬಹುದೆಂದು ಕೇಂದ್ರ ಸರ್ಕಾರ ಲಸಿಕಾ ನೀತಿಯೊಂದನ್ನು ಹೊರಡಿಸಿದೆ. ಇದರಿಂದಾಗಿ ರಾಜ್ಯಗಳು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತವೆ. ಆದರೂ ನಮಗೆ ಜನರ ಜೀವ ಮುಖ್ಯ. ಎರಡನೇ ನಡುವೆಯೇ ಮೂರನೇ ಅಲೆಯು ಮುಂದಿನ ದಿನಗಳಲ್ಲಿ ಆವರಿಸಿಕೊಳ್ಳಲಿದೆ ಎಂಬ ಎಚ್ಚರಿಕೆಗಳನ್ನು ತಜ್ಞರು ನೀಡುತ್ತಿದ್ದಾರೆ. ಅದರಿಂದ ರಕ್ಷಣೆ ಪಡೆಯಬೇಕಾದರೆ ಇರುವುದೊಂದೇ ದಾರಿ; ವ್ಯಾಕ್ಸಿನ್ ನೀಡುವುದು. ಆದರೆ ಅದಾರ್ ಪೂನಾವಾಲ ದೇಶದ ಎಲ್ಲರಿಗೆ ಲಸಿಕೆ ನೀಡಲು ಎರಡು ವರ್ಷಗಳಾಗಬಹುದೆಂದು ಹೇಳುತ್ತಿದ್ದಾರೆ. ಹಾಗಿದ್ದರೆ ದೇಶದ ಜನರನ್ನು ಕಾಪಾಡುವುದು ಹೇಗೆ?

17. ಇದಕ್ಕೆ ಈಗ ಇರುವ ಪರಿಹಾರವೊಂದೆ. ವಿಶ್ವದ ಅನೇಕ ಕಂಪೆನಿಗಳು ವ್ಯಾಪಕ ಪ್ರಮಾಣದಲ್ಲಿ ಲಸಿಕೆಗಳನ್ನು ಉತ್ಪಾದಿಸುತ್ತಿವೆ. ಸಾಧ್ಯವಾದ ಕಡೆಗಳಿಂದೆಲ್ಲ ಅವುಗಳನ್ನು ಪಡೆದು ಕೇಂದ್ರ ಸರ್ಕಾರ ಉಚಿತವಾಗಿ ಜನರಿಗೆ ಆಂದೋಲನದ ಮಾದರಿಯಲ್ಲಿ ನೀಡಬೇಕು.

18. ಕೊರೋನ ನಿರೋಧಕ ಲಸಿಕೆಗಳನ್ನು ನೀಡುವುದಕ್ಕೆಂದೇ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ 35000 ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ಘೋಷಿಸಿದೆ. ಅದರಲ್ಲಿ ಒಂದು ಭಾಗದಷ್ಟು ಹಣವನ್ನೂ ಖರ್ಚು ಮಾಡಿಲ್ಲ ಏಕೆ?ರಾಜ್ಯಗಳು ಒಂದು ಲಸಿಕೆಗೆ 300 ರೂ.ಗಳನ್ನು ನೀಡಿ ಯಾಕೆ ಕೊಂಡುಕೊಳ್ಳಬೇಕು? ಕರ್ನಾಟಕದಿಂದ ವರ್ಷಕ್ಕೆ 2.5 ಲಕ್ಷ ಕೋಟಿಗಳಷ್ಟು ತೆರಿಗೆಯನ್ನು ದೋಚಿಕೊಳ್ಳುವ ಕೇಂದ್ರ ಸರ್ಕಾರ ನಮಗೆ ವಾಪಸ್ಸು ನೀಡುತ್ತಿರುವುದು ಮಾತ್ರ ಕೇವಲ 50 ಸಾವಿರ ಕೋಟಿ ಮಾತ್ರ. ನಮ್ಮ ರಾಜ್ಯದ ಸಂಸದರುಗಳು ಇದನ್ನು ಕೇಂದ್ರ ಸರ್ಕಾರಕ್ಕೆ ಕೇಳಬೇಕಲ್ಲವೆ?

19. ಬಿಜೆಪಿ ಭಟ್ಟಂಗಿಗಳು ಮಾತನಾಡುವುದಕ್ಕೆ ಮೊದಲು ಯೋಚನೆ ಮಾಡಿ ಮಾತನಾಡಬೇಕು. ಕೇಂದ್ರ ಸರ್ಕಾರವು ಮಾರ್ಚ್ ತಿಂಗಳ ಒಳಗೆ ದೇಶದಲ್ಲಿರುವ 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಿ ಮುಗಿಸುವ ಗುರಿ ನಿಗಧಿ ಪಡಿಸಿಕೊಂಡಿತ್ತು. ಆದರೆ ಸಾಧ್ಯವಾಗಿದ್ದು ಮಾತ್ರ 1.4 ಕೋಟಿ ಮಾತ್ರ. ಯಾಕೆ ಗುರಿ ಸಾಧಿಸಲಾಗಲಿಲ್ಲ?

20. ಲಸಿಕೆಗಳ 3ನೇ ಹಂತದ ಟ್ರಯಲ್‍ಗಳ ಕುರಿತು ಹಲವು ತಜ್ಞರು ಪ್ರಶ್ನೆಗಳನ್ನು ಎತ್ತಿದ್ದರು. ಉದಾಹರಣೆಗೆ ಗಗನ್ ದೀಪ್ ಎಂಬ ಪ್ರಖ್ಯಾತ ತಜ್ಞರು ಹಲವು ಸ್ಪಷ್ಟನೆಗಳನ್ನು ಕೇಳಿದ್ದರು. ಈ ಪ್ರಶ್ನೆಗಳಿಗೆ ಕೇಂದ್ರದ ಆಡಳಿತಗಾರರು ಉತ್ತರಿಸಬೇಕು. ಸರ್ಕಾರದ ವಿವಿಧ ಹಂತಗಳ ತಜ್ಞರು, ಮುಖಂಡರುಗಳು ಮೊದಲಿಗೆ ಲಸಿಕೆ ಹಾಕಿಸಿಕೊಂಡು ಜನರಿಗೆ ಅರಿವು ಮೂಡಿಸಲಿ. ದೇಶದಲ್ಲಿ ಜನವರಿ 16 ರಿಂದಲೇ ಲಸಿಕೆ ಹಾಕುವ ಕಾರ್ಯಕ್ರಮ ಪ್ರಾರಂಭಿಸಲಾಗಿತ್ತು. ಆದರೆ ಪ್ರಧಾನಿಗಳು ಮತ್ತು ಗೃಹ ಸಚಿವರು ಲಸಿಕೆ ಹಾಕಿಸಿಕೊಂಡಿದ್ದು ಮಾರ್ಚ್ 1 ರಂದು. ಆರೋಗ್ಯ ಸಚಿವರು ಹಾಕಿಸಿಕೊಂಡಿದ್ದು ಮಾರ್ಚ್ 2 ರಂದು. ಇವರುಗಳೆಲ್ಲ ಯಾಕೆ ಹೀಗೆ ಮಾಡಿದರು?

21. ಕಾಂಗ್ರೆಸ್‍ನ ಯಾವ ನಾಯಕರೂ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಹೇಳಿಲ್ಲ. ತಜ್ಞರು ಎತ್ತಿರುವ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿ. ಲಸಿಕೆಗಳ ಟ್ರಯಲ್‍ಗಳನ್ನುಪೂರ್ಣಗೊಳಿಸಿ, ಎಂದು ಹೇಳಿದ್ದರೆ ಅದು ತಪ್ಪೆ?

22. ದೇಶದ ಮಕ್ಕಳಿಗೆ ಲಸಿಕೆ ಇಲ್ಲದಿದ್ದಾಗ ಹೊರದೇಶಗಳಿಗೆ ಕೇವಲ 3 ಡಾಲರ್‍ಗಳ ಬೆಲೆಗೆ ರಫ್ತು ಮಾಡಲಾಗಿದೆ. ಆದರೆ ನಮ್ಮ ದೇಶದ ಜನರಿಗೆ 1200 ರೂ.ಗಳ ವರೆಗೆ ಬೆಲೆ ನಿಗಧಿಪಡಿಸಲಾಗಿದೆ. ಬಡ ದೇಶಗಳಿಗೆ ಹೋಗಲಿ ಇಂಗ್ಲೆಂಡಿಗೂ 5.5 ದಶ ಲಕ್ಷ ವ್ಯಾಕ್ಸಿನ್ ಗಳನ್ನು ನಿಯಮ ಬಾಹಿರವಾಗಿ ರಫ್ತು ಮಾಡಲಾಗಿದೆ.

23. ಲಸಿಕೆಗಳನ್ನು ಬೇರೆ ದೇಶಗಳಿಗೆ ಕಳುಹಿಸಿ ಕೊಡುವುದಕ್ಕೋಸ್ಕರವಾಗಿಯೇ ಜನವರಿ 20 ನೇ ತಾರೀಖಿನಿಂದ ‘ ಮೈತ್ರಿ’ ಎಂಬ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಏಪ್ರಿಲ್ ಮೊದಲ ವಾರದವರೆಗೆ ಸುಮಾರು 85 ದೇಶಗಳಿಗೆ 6.5 ಕೋಟಿ ಲಸಿಕೆಗಳನ್ನು ರಫ್ತು ಮಾಡಲಾಗಿದೆ. ಬೇರೆ ಬಡದೇಶಗಳಿಗೆ ಕಳುಹಿಸಬೇಡಿ ಎಂಬಷ್ಟು ಸಂಕುಚಿತ ಮನಸ್ಸಿನವರಲ್ಲ ನಮ್ಮ ಜನರು. ಅದರಲ್ಲೂ ಕೊರೋನಾದಂತಹ ಸಾಂಕ್ರಾಮಿಕವನ್ನು ಜಾಗತಿಕ ಸಹಕಾರಗಳ ಮೂಲಕವೇ ನಿರ್ಮೂಲನೆ ಮಾಡಬೇಕು. ಆದರೆ ಜಗತ್ತಿನ ಬಹುಪಾಲು ದೇಶಗಳೆಲ್ಲ ಮೊದಲು ತಮ್ಮ ದೇಶದ ಜನರಿಗೆ ಲಸಿಕೆ ನೀಡುತ್ತಿವೆ. ಹೆಚ್ಚುವರಿ ಲಸಿಕೆಗಳನ್ನು ತಮ್ಮಲ್ಲೇ ಉಳಿಸಿಕೊಂಡಿವೆ. ಆದರೆ ಭಾರತ ಮಾತ್ರ ಇಂಗ್ಲೆಂಡಿಗೂ 5.5 ಮಿಲಿಯನ್ ಲಸಿಕೆಗಳನ್ನು ರಫ್ತು ಮಾಡಿದೆ. ನಮ್ಮ ದೇಶದ ಪ್ರಧಾನಿಗಳು ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಅಲ್ಲವೆ?

24. ಅಮೇರಿಕದಂತಹ ದೇಶ ಕೂಡ ಒಂದೇ ಒಂದು ಡೋಸ್ ಲಸಿಕೆಯನ್ನು ರಫ್ತು ಮಾಡಲಿಲ್ಲ. 2020 ರ ಜುಲೈ, ಆಗಸ್ಟ್ ತಿಂಗಳುಗಳಲ್ಲೆ ಜಗತ್ತಿನ ವಿವಿಧ ದೇಶಗಳು ತಮ್ಮ ದೇಶದ ಜನಸಂಖ್ಯೆಗಿಂತ ಹೆಚ್ಚಿನ ಲಸಿಕೆಗಳಿಗೆ ಆದೇಶ ನೀಡಿದ್ದರು. ಉತ್ಪಾದಿಸಿಕೊಡುವಂತೆ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಕೆನಡ, ಯುರೋಪಿಯನ್ ಒಕ್ಕೂಟ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ ಮುಂತಾದ ದೇಶಗಳು ತಮ್ಮ ದೇಶದ ಜನಸಂಖ್ಯೆಗಿಂತ ಎರಡರಿಂದ 5 ಪಟ್ಟು ಹೆಚ್ಚು ಲಸಿಕೆಗಳಿಗಾಗಿ ಆದೇಶ ನೀಡಿದ್ದವು. ಮುಂದುವರೆಯುತ್ತಿರುವ ದೇಶಗಳಾದ ಇಂಡೋನೇಶಿಯಾ, ಬ್ರೆಜಿಲ್, ಆಫ್ರಿಕಾದ ಒಕ್ಕೂಟದ ದೇಶಗಳೂ ಸಹ ತನ್ನ ಜನಸಂಖ್ಯೆಯ ಶೇ 40 ಕ್ಕೂ ಹೆಚ್ಚು ಲಸಿಕೆಗಳಿಗೆ ಆದೇಶ ನೀಡಿದ್ದವು. ಆದರೆ ನಮ್ಮ ದೇಶದಲ್ಲಿ ಆಡಳಿತ ನಡೆಸುತ್ತಿರುವವರು 2021 ರ ಜನವರಿಯಲ್ಲಿ 1 ಕೋಟಿ 65 ಲಕ್ಷ ಲಸಿಕೆಗಳಿಗೆ ಮಾತ್ರ ಆದೇಶ ನೀಡಿದ್ದರು. ಇಂಥ ಮತಿಹೀನ ತೀರ್ಮಾನಗಳಿಂದಾಗಿಯೇ ದೇಶದಲ್ಲಿ ಲಕ್ಷಾಂತರ ಜನ ಮರಣ ಹೊಂದುತ್ತಿದ್ದಾರೆ. ಮೋದಿಯವರ ಇಂಥ ಭೀಕರ ತಪ್ಪುಗಳನ್ನು ಸಮರ್ಥನೆ ಮಾಡುವುದಕ್ಕಾಗಿಯೇ ಈಗ ಅವರ ಪಟಾಲಂ ಜನರನ್ನು ಬಿಟ್ಟು, ವಿರೋಧ ಪಕ್ಷಗಳನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ.

25. ಬಿಜೆಪಿಯವರು ಜನರು ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ ಎಂದು ಜನರ ಮೇಲೆ ಆರೋಪ ಮಾಡುತ್ತಾರಲ್ಲ ಆ ಅವಧಿಯಲ್ಲಿ ಮಾರ್ಚ್ 7 ನೇ ತಾರೀಖಿನಿಂದ ಏಪ್ರಿಲ್ 25 ರವರೆಗೆ ಪ್ರತಿ ದಿನ 25 ಲಕ್ಷ ಡೋಸ್ ನಿಂದ ಹಿಡಿದು 45 ಲಕ್ಷ ಡೋಸ್ ಲಸಿಕೆಗಳನ್ನು ಜನರಿಗೆ ನೀಡಲಾಗಿದೆ. ಆದರೆ ಜನ ಲಸಿಕೆ ಬೇಕು ಎಂದು ಏಪ್ರಿಲ್ 25 ರಿಂದ ಈಚೆಗೆ ದಿನಕ್ಕೆ ಕೇವಲ 10ರಿಂದ 13 ಲಕ್ಷಕ್ಕೆ ಇಳಿಸಿರುವುದು ಏಕೆ? ಲಸಿಕೆ ಬೇಕು ಎಂದು ಜನ ಕೇಳುತ್ತಿದಾರಲ್ಲ ಕೊಡಿ ಹಾಗಿದ್ದರೆ. ಏಪ್ರಿಲ್ 28 ನೇ ತಾರೀಖಿನಂದು ಒಂದೇ ದಿನ 1.33 ಕೋಟಿ ಯುವಕರು ಲಸಿಕೆ ಬೇಕು ಎಂದು ಕೋರಿದರು. ಮೇ 1 ರಿಂದ ಲಸಿಕೆ 18 ತುಂಬಿದವರಿಗೂ ಲಸಿಕೆ ನೀಡಲಾಗುವುದೆಂದು ಹೇಳಿ ಕಡೆಗೆ ಅನಿರ್ಧಿಷ್ಟಾವಧಿ ಮುಂದೂಡಿದರು. ಇನ್ನೂ ಸಮರ್ಪಕವಾಗಿ ಪ್ರಾರಂಭಿಸಿಲ್ಲ ಏಕೆ? ಖಾಸಗಿ ಆಸ್ಪತ್ರೆಗಳಿಗೆ ಹೋಗಿ 1000 ರೂ.ಗಳಿಗೂ ಅಧಿಕ ಹಣ ನೀಡಿ ಲಸಿಕೆಹಾಕಿಸಿಕೊಳ್ಳಲಿ ಎಂದು ತೀರ್ಮಾನಿಸಿ ಸರ್ಕಾರ ಲಸಿಕೆ ನೀಡುತ್ತಿಲ್ಲವೆ?ಇದನ್ನೆಲ್ಲ ನೋಡಿದರೆ ಕೇಂದ್ರ ಸರ್ಕಾರ ಜನಪರವಾಗಿದೆ ಎನ್ನಿಸುತ್ತದೆಯೇ?

26. ಕೊರೋನ ಎರಡನೇ ಅಲೆಯ ಸಾವು ನೋವುಗಳಿಗೆ, ಲಸಿಕೆ ಅಭಾವಕ್ಕೆ ಕೇಂದ್ರದ ಬಿಜೆಪಿ ನಾಯಕರುಗಳ ಅವೈಜ್ಞಾನಿಕ, ದೂರದೃಷ್ಟಿ ಇಲ್ಲದ, ವಿಜ್ಞಾನಿಗಳ, ತಜ್ಞರ ಮಾತು ಕೇಳದ ಸರ್ವಾಧಿಕಾರಿ ಧೋರಣೆಯೇ ಕಾರಣ. ಜನರ ಕಗ್ಗೊಲೆಗಳಿಗೂ ಇದೇ ಕಾರಣ.

27. ಲಸಿಕೆ ನೀಡಲು ಸಿದ್ಧಪಡಿಸಿರುವ ತಂತ್ರಾಂಶದ ಗೊಂದಲ, ಬೆಲೆಯ ಗೊಂದಲ, ಅಸ್ಪಷ್ಟತೆ, ಲಸಿಕೆಗಳ ಕೊರತೆ, ಕಾರ್ಪೊರೇಟ್‍ಗಳ ಲಾಭ. ಜಗತ್ತಿನ ತಜ್ಞರುಗಳೆಲ್ಲ ಭಾರತದಲ್ಲಿ ಎರಡನೇ ಅಲೆ ಬರುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದರೂ ಭಾರತ ಕೊರೋನಾ ವಿರುದ್ಧ ಗೆದ್ದುಬಿಟ್ಟಿದೆ ಎಂದು ಹೇಳಿಕೆ ನೀಡಿದ ಹುಂಬತನ ಜನರ ಸಾವಿಗೆ ಕಾರಣವಾಗಿದೆ ಎಲ್ಲದಕ್ಕೂ ಉತ್ತರ ನೀಡಬೇಕಾಗಿದ್ದು ಸರ್ಕಾರದ ಕರ್ತವ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...