ವಿಧಾನಸಭಾ ಉಪ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹೆಚ್. ವಿಶ್ವನಾಥ್ ಅವರಿಗೆ ನಿರಾಸೆಯಾಗಿದೆ. ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಅವರಿಗೆ ಅವಕಾಶ ನೀಡಿರುವ ಬಿಜೆಪಿ ಹೈಕಮಾಂಡ್ ವಿಶ್ವನಾಥ್ ರನ್ನು ಕೈಬಿಟ್ಟಿದೆ.
ಹೀಗಾಗಿ ತೀವ್ರ ಬೇಸರದಲ್ಲಿರುವ ವಿಶ್ವನಾಥ್, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆನ್ನಲಾಗಿದೆ.
ಇದರ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್, ಕುತಂತ್ರ ರಾಜಕಾರಣ ನಡೆಸುವ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ತಮಗೆ ಟಿಕೆಟ್ ತಪ್ಪಿಸಲು ಷಡ್ಯಂತ್ರ ನಡೆಸಿದ್ದಾರೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಶ್ವನಾಥ್ ಅವರಿಗೆ ನಾನೇಕೆ ಟಿಕೆಟ್ ತಪ್ಪಿಸಲಿ. ವಿಶ್ವನಾಥ್ ಪ್ರಕಾರ ನಾನೇನು ಬಿಜೆಪಿ ಹೈಕಮಾಂಡಾ ಎಂದು ಕೇಳಿದ್ದಾರಲ್ಲದೇ ಅವನಿಗೆ ಬುದ್ಧಿ ಇಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.