ಬೆಂಗಳೂರು: ಮಗಳ ಮನೆಗೆಂದು ಬಂದ ವೃದ್ಧ ಅರ್ಚಕನೊಬ್ಬ ಅಪ್ರಾಪ್ತ ಬಾಲಕಿಗೆ ತಿಂಡಿ ಆಸೆ ತೋರಿಸಿ ಮನೆಗೆ ಕರೆದು ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದೆ.
ಸಧ್ಯ 60 ವರ್ಷದ ಆರೋಪಿ ವೆಂಕಟರಮಣಪ್ಪನನ್ನು ಬಂಧಿಸಲಾಗಿದೆ. ದೇವಾಲಯದ ಅರ್ಚಕನಾಗಿದ್ದ ವೆಂಕಟರಮಣಪ್ಪ ದೇವನಹಳ್ಳಿಯಲ್ಲಿರುವ ಮಗಳ ಮನೆಗೆಂದು ಬಂದಿದ್ದಾನೆ. ಈ ವೇಳೆ ಮಗಳ ಮನೆ ಹೊರಗಡೆ ಬಾಲಕಿಯೊಬ್ಬಳು ಆಟವಾಡುತ್ತಿದ್ದನ್ನು ನೋಡಿ ಆಕೆಯ ಮೇಲೆ ಕಣ್ಣುಹಾಕಿದ್ದಾನೆ.
ಮನೆಯಲ್ಲಿ ಮಗಳು-ಅಳಿಯ ಇಲ್ಲದ ಸಮಯ ನೋಡಿ ಬಾಲಕಿಗೆ ತಿಂಡಿಕೊಡುವುದಾಗಿ ಹೇಳಿ ಆಕೆಯನ್ನು ಮನೆಯೊಳಗೆ ಕರೆದು ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಟವಾಡಲು ಹೋದ ಬಾಲಕಿ ಎಷ್ಟು ಸಮಯವಾದರೂ ಬಾರದಿದ್ದಾಗ ಗಾಬರಿಗೊಂಡ ಪೋಷಕರು ಹುಡುಕಾಡಿದ್ದಾರೆ. ಅರ್ಚಕನ ಮನೆಗೆ ಹೋಗಿದ್ದನ್ನು ಗಮನಿಸಿದ್ದ ಅಕ್ಕ-ಪಕ್ಕದ ಮನೆವರು ಪೋಷಕರಿಗೆ ತಿಳಿಸಿದ್ದಾರೆ. ಬಂದು ನೋಡಿದಾಗ ಬಾಲಕಿ ಅಳುತ್ತಾ ಹೊರಗೆ ಬಂದು ಪೋಷಕರಿಗೆ ನಡೆದ ಘಟನೆ ವಿವರಿಸಿದ್ದಾಳೆ. ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.