ತಂತ್ರಜ್ಞಾನ ಬೆಳೆದಂತೆ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈವರೆಗೆ ಮೊಬೈಲ್ ಗೆ ಕರೆ ಮಾಡಿ ಬ್ಯಾಂಕ್ ಸಿಬ್ಬಂದಿ ಎಂದು ನಂಬಿಸಿ ಖಾತೆಯ ಮಾಹಿತಿಯನ್ನು ಪಡೆದುಕೊಂಡು ಹಣ ಲಪಟಾಯಿಸುತ್ತಿದ್ದ ವಂಚಕರು ಈಗ ಮತ್ತೊಂದು ವಿಧಾನವನ್ನು ಕಂಡುಕೊಂಡಿದ್ದಾರೆ.
ಹೌದು, ವಿಡಿಯೋ ಕಾಲ್ ಮಾಡಿ ಅಶ್ಲೀಲ ಚಿತ್ರವನ್ನು ಬಿತ್ತರಿಸುವ ವಂಚಕರು ಬಳಿಕ ಮತ್ತೊಮ್ಮೆ ಕರೆ ಮಾಡಿ ನೀವು ಹಣ ನೀಡದಿದ್ದರೆ ಅಶ್ಲೀಲ ಚಿತ್ರ ವೀಕ್ಷಿಸಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.
ಇಂತಹುದೊಂದು ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದ್ದು, ಪರಿಸರ ಹೋರಾಟಗಾರರೊಬ್ಬರಿಗೆ ವಿಡಿಯೋ ಕರೆ ಮಾಡಿ ಅಶ್ಲೀಲ ವಿಡಿಯೋ ಬಿತ್ತರಿಸಿದ ಬಳಿಕ ಹಣ ನೀಡುವಂತೆ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಬೆದರಿಕೆಗೆ ಒಳಗಾದ ವ್ಯಕ್ತಿ ಈಗ ಸೈಬರ್ ಪೊಲೀಸರಿಗೆ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ.