
ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ ಬಳಿಕ ಕಳೆದ ಮಾರ್ಚ್ ತಿಂಗಳಿನಿಂದ ಶಾಲಾ – ಕಾಲೇಜುಗಳು ಬಂದ್ ಆಗಿವೆ. ಇದೀಗ ಲಾಕ್ ಡೌನ್ ತೆರವುಗೊಂಡರೂ ಸಹ ಶಾಲಾ – ಕಾಲೇಜುಗಳ ಆರಂಭಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.
ಸೆಪ್ಟೆಂಬರ್ 1 ರಿಂದ ಶಾಲಾ – ಕಾಲೇಜುಗಳನ್ನು ಹಂತಹಂತವಾಗಿ ಆರಂಭಿಸುವ ಚಿಂತನೆ ನಡೆದಿದೆಯಾದರೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಹೀಗಾಗಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 14000 ಉಪನ್ಯಾಸಕರು ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದೀಗ ಇವರುಗಳಿಗೆ ನೆರವು ನೀಡುವ ಕುರಿತಂತೆ 430 ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಯಂ ಉಪನ್ಯಾಸಕರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಧನಸಹಾಯ ಮಾಡಲು ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ ನಿರ್ಧರಿಸಿದ್ದು, ಯಾವ ರೀತಿಯಲ್ಲಿ ಹಾಗೂ ಹೇಗೆ ಸಹಾಯ ನೀಡಬೇಕೆಂಬುದನ್ನು ನಿರ್ಧರಿಸುವ ಕುರಿತು ಆಗಸ್ಟ್ 10ರಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಬಳಿ ಚರ್ಚೆ ನಡೆಸಲು ಸಂಘ ಮುಂದಾಗಿದೆ.