ಮಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ವ್ಯಕ್ತಿಯೊಬ್ಬ ಚಿನ್ನವನ್ನು ಪುಡಿಮಾಡಿ ದೇಹಕ್ಕೆ ಮೆತ್ತಿಕೊಂಡು ದುಬೈನಿಂದ ಮಂಗಳೂರಿಗೆ ಬಂದಿದ್ದಾನೆ. ಹೀಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಯನ್ನು ಅಬೂಬಕ್ಕರ್ ಸಿದ್ಧೀಕ್ ಎಂದು ಗುರುತಿಸಲಾಗಿದೆ. 24 ಕ್ಯಾರೆಟ್ ನ 614 ಗ್ರಾಂ ತೂಕದ ಚಿನ್ನವನ್ನು ಪುಡಿ ಮಾಡಿ ಮೈಗೆ ಮೆತ್ತಿಕೊಂಡು ಯಾರಿಗೂ ಗೊತ್ತಾಗಬಾರದೆಂದು ಬಂದಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸಿಕ್ಕಿಬಿದ್ದಿದ್ದಾನೆ.
ಆರೋಪಿ ದೇಹಕ್ಕೆ ಲೇಪಿಸಿಕೊಂಡಿದ್ದ 32,96,300 ರೂ ಮೌಲ್ಯದ ಚಿನ್ನವನ್ನು ಇದೀಗ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.