ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಆದರೆ ಅವರುಗಳಿಗೆ ಸಕಾಲಕ್ಕೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರುಗಳು ಪದೇಪದೇ ಕೇಳಿಬರುತ್ತಿವೆ. ಇದರ ಜೊತೆಗೆ ಕೊರೊನಾ ಪಾಸಿಟಿವ್ ಬಂದವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಂಬುಲೆನ್ಸ್ ಸಿಗುತ್ತಿಲ್ಲ ಎನ್ನಲಾಗುತ್ತಿದೆ.
ಇದೇ ರೀತಿ ಕೊರೊನಾ ಸೋಂಕಿಗೊಳಗಾದ ವ್ಯಕ್ತಿಯೊಬ್ಬ ತನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಂಬುಲೆನ್ಸ್ ಬರುತ್ತದೆ ಎಂದು ಕಾದು ಕಾದು ಸಾಕಾಗಿ ಬಳಿಕ ಸಾರ್ವಜನಿಕವಾಗಿ ಓಡಾಟ ನಡೆಸಿ ಬೆದರಿಕೆ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಈ ವ್ಯಕ್ತಿ ರೈಲ್ವೆ ಗುತ್ತಿಗೆದಾರನಾಗಿದ್ದು, ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿಯಿರುವ ಲಾಡ್ಜ್ ನಲ್ಲಿ ತಂಗಿದ್ದ. ಈತನಿಗೆ ಸೋಂಕು ತಗುಲಿರುವುದು ತಿಳಿಯುತ್ತಿದ್ದಂತೆ ತನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದ.
ಶನಿವಾರ ರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೆ ಕಾದರೂ ಅಂಬುಲೆನ್ಸ್ ಬಾರದ ಕಾರಣ ಮಾಧ್ಯಮಗಳ ಮುಂದೆ ತನ್ನ ಅಳಲು ತೋಡಿಕೊಂಡ ಈ ವ್ಯಕ್ತಿ ಬಳಿಕ ಸಾರ್ವಜನಿಕವಾಗಿ ಓಡಾಟ ನಡೆಸಿ ಬೆದರಿಕೆ ಹಾಕಿದ್ದ. ಕೊನೆಗೂ ಅಂಬುಲೆನ್ಸ್ ನೊಂದಿಗೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿ, ಆತನ ಮನವೊಲಿಸಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.