ಬೆಂಗಳೂರು: ತಮ್ಮ ವಿರುದ್ಧ ಸಿಡಿ ಯುವತಿ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೊನೇಯ ಅಸ್ತ್ರವನ್ನು ಬಿಟ್ಟಿದ್ದಾರೆ. ನಾಳೆಯಿಂದ ನಮ್ಮ ಆಟ ಶುರುವಾಗುತ್ತೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ 10 ಸಿಡಿಗಳು ಬಂದರೂ ಎದುರಿಸಲು ನಾನು ಸಿದ್ಧ. ಮಹಾನಾಯಕ ಯಾರೆಂದು ಗೊತ್ತಾಗುತ್ತೆ. ನಾನು ಯಾವುದಕ್ಕೂ ಅಂಜುವ ವ್ಯಕ್ತಿಯಲ್ಲ. ಅಂತಹ ಸರ್ಕಾರವನ್ನೇ ತೆಗೆದಿದ್ದೇನೆ ಇನ್ನು ಇದ್ಯಾವ ಲೆಕ್ಕ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಸವಾಲು ಹಾಕಿದ್ದಾರೆ.
ರೇಪ್ ಕೇಸ್ ದಾಖಲಿಸಿದರೂ ಹೋರಾಡಲು ಸಿದ್ಧನಿದ್ದೇನೆ – ರಮೇಶ್ ಜಾರಕಿಹೊಳಿ
ಪ್ರಕರಣ ಸಂಬಂಧ ನಾನು ಮೊದಲು ದೂರು ನೀಡಿದ್ದೇನೆ. ನನ್ನ ದೂರಿನ ಬಗ್ಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ರನ್ನು ಕೇಳುತ್ತೇನೆ. ನಾನು ನಿರಪರಾಧಿ. ನಾನು ಹೋರಾಟಗಾರ ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ. ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದರು.