ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟ ನಡೆಸುತ್ತಿರುವ ಮಧ್ಯೆ ಇದರ ನಿಯಂತ್ರಣಕ್ಕಾಗಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇವರ ಜೊತೆಗೆ ಇನ್ನೂ ಹಲವರು ಸಹ ತಮ್ಮದೇ ಆದ ರೀತಿಯಲ್ಲಿ ಸಹಕರಿಸುತ್ತಿದ್ದಾರೆ.
ಪ್ರಮುಖವಾಗಿ ಆಶಾ ಕಾರ್ಯಕರ್ತೆಯರು ಕೊರೊನಾ ನಿಯಂತ್ರಣಕ್ಕೆ ಸೇವೆಯಲ್ಲಿ ತೊಡಗಿದ್ದು, ಹೀಗಾಗಿ ಸರ್ಕಾರ ಕರ್ತವ್ಯನಿರತ ಆಶಾ ಕಾರ್ಯಕರ್ತೆಯರು ಮೃತಪಟ್ಟರೆ 50 ಲಕ್ಷ ರೂಪಾಯಿ ವಿಮೆ ಸೌಲಭ್ಯ ನೀಡಲು ತೀರ್ಮಾನ ಕೈಗೊಂಡಿತ್ತು.
ಅಂಗನವಾಡಿ ಕಾರ್ಯಕರ್ತೆಯರೂ ಸಹ ಲಾಕ್ಡೌನ್ ಸಂದರ್ಭದಲ್ಲಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ತಮ್ಮ ಜೀವವನ್ನು ಲೆಕ್ಕಿಸದೆ ಮನೆ ಬಾಗಿಲಲ್ಲೇ ಸೇವೆ ನೀಡಿದ್ದಾರೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೂ 30 ಲಕ್ಷ ರೂಪಾಯಿ ವಿಮೆ ಸೌಲಭ್ಯ ಒದಗಿಸಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.