ಶಿವಮೊಗ್ಗ: ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತರಲ್ಲದವರು ಭೂಮಿ ಖರೀದಿಸಲು ಕಾನೂನು ಮಾಡಿರುವುದು ರೈತ ಕುಲವೇ ನಾಶವಾಗಿ ಆಹಾರ ಭದ್ರತೆಗೆ ಅಪಾಯ ತಂದೊಡ್ಡಲಿರುವುದರಿಂದ ಕೂಡಲೇ ಈ ನಿರ್ಧಾರ ಹಿಂಪಡೆಯಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರಲ್ಲದವರು ಕೃಷಿ ಭೂಮಿ ಕೊಳ್ಳಲು ಈ ಹಿಂದೆ ಇದ್ದ 25 ಲಕ್ಷ ಆದಾಯ ಮಿತಿಯನ್ನು ತೆಗೆದು ಹಾಕಿರುವುದು ಉಳುವವನೇ ಭೂ ಒಡೆಯ ಕಾಯ್ದೆಗೆ ತದ್ವಿರುದ್ದವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಹಿಂದೆ ಸಾಮಾಜಿಕ ಕಲ್ಪನೆಯಡಿ ಉಳುವವನಿಗೆ ಭೂಮಿ ಕೊಡುವುದು ಮತ್ತು ಒಬ್ಬ ರೈತ ಜಮೀನು ಹೊಂದಲು ಮಿತಿ ಹಾಕಿ ಕಾಯ್ದೆ ರೂಪಿಸಲಾಗಿತ್ತು. ಹಣ ಉಳ್ಳವರು ಬಹುತೇಕ ಕಪ್ಪು ಹಣವಿರುವ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ವ್ಯಾಪಾರಸ್ಥರು ಜೊತೆಗೆ ದೊಡ್ಡ ದೊಡ್ಡ ಉದ್ದಿಮೆದಾರರು, ಕೋಟ್ಯಾಧೀಶರು ಎಕರೆಗೆ ಮಾರುಕಟ್ಟೆಯಲ್ಲಿ 50ಲಕ್ಷ ಬೆಲೆ ಬಾಳುವ ಭೂಮಿಯನ್ನು ರಿಜಿಸ್ಟರ್ ಕಛೇರಿಯ ಬೆಲೆ 10ಲಕ್ಷ ರೂಪಾಯಿ ನಮೂದಿಸಿ, ಕೊಂಡುಕೊಂಡು ಕಪ್ಪು ಹಣ ಚಲಾವಣೆ ಮಾಡಲು ಈ ಕಾಯ್ದೆ ಅನುಕೂಲ ಮಾಡಿಕೊಟ್ಟಿದೆ ಎಂದರು.
ದೊಡ್ಡ ದೊಡ್ಡ ಬಂಡವಾಳ ಶಾಹಿಗಳು ಭೂಮಿ ಖರೀದಿ ಮಾಡಲು ಮುಂದಾಗುವುದರಿಂದ ಭೂಮಿ ಬೆಲೆ ಹೆಚ್ಚಾಗುತ್ತದೆ. ಶೇ.80 ಭಾಗವಿರುವ ಸಣ್ಣ ಮತ್ತು ಅತೀ ಸಣ್ಣ ರೈತರು ಮೊದಲೇ ಸಾಲದಲ್ಲಿ ನರಳುತ್ತಿರುವುದರಿಂದ ಖಾಸಗಿ, ಫೈನಾನ್ಸ್ ಮತ್ತು ಬ್ಯಾಂಕ್, ಸೊಸೈಟಿ ಸಾಲಗಾರರ ಕಿರುಕುಳಕ್ಕೆ ಹೆದರಿ ಭೂಮಿಯನ್ನು ಮಾರಿಕೊಂಡು ಕೃಷಿ ಕಾರ್ಮಿಕರಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ತಿದ್ದುಪಡಿ ಕಾಯ್ದೆ ಜಾರಿಯಾದರೆ ರಿಯಲ್ ಎಸ್ಟೇಟ್, ಖಾಸಗಿ ಶಾಲೆಗಳು, ಆಸ್ಪತ್ರೆಗಳು, ಮೋಜುಮಸ್ತಿಗಾಗಿ ರೆಸಾರ್ಟ್‍ಗಳು ತಲೆ ಎತ್ತುವುದರಿಂದ ಕೃಷಿ ಭೂಮಿ ನಾಶವಾಗಿ ಆಹಾರದ ಅಭಾವ ತಲೆದೋರುತ್ತದೆ. ಆಹಾರ ಭದ್ರತೆ ಕಲ್ಪನೆ ನಾಶವಾಗಿ ಮುಂದೊಂದು ದಿನ ಆಹಾರದ ಕೊರತೆ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.