ಡಿಸೆಂಬರ್ 5ರಂದು ಕನ್ನಡ ಹೋರಾಟಗಾರರು ಬಂದ್‌ಗೆ ಕರೆ ನೀಡಿದ್ದಾರೆ. ಮರಾಠ ಅಭಿವೃದ್ಧಿ ನಿಗಮವನ್ನು ಬಿಎಸ್‌ವೈ ರಚಿಸಿದ ಬೆನ್ನಲ್ಲೇ ವಿರೋಧದ ಅಲೆ ಎದ್ದಿದೆ. ಕನ್ನಡಕ್ಕೆ ಯಡಿಯೂರಪ್ಪ ಅವಮಾನ ಮಾಡುತ್ತಿದ್ದಾರೆ ಎಂದು ಬಂದ್‌ಗೆ ಕರೆ ನೀಡಲಾಗಿದೆ.
ಆದರೆ ಅನೇಕರು ಬಂದ್ ಅನ್ನು ವಿರೋಧಿಸುತ್ತಿದ್ದಾರೆ. ಇದೀಗ ಅರಸೀಕೆರೆ ಕಾಳಿ ಮಠದ ಋಷಿಕುಮಾರ ಸ್ವಾಮಿ ಬಂದ್ ಎಂದು ಅಂಗಡಿ ಮುಚ್ಚಿಸಲು ಬಂದರೆ ಕಲ್ಲಲ್ಲಿ ಹೊಡೆದು ಕಳಿಸಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ರಾಮಸೇನಾ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಟಾಳ್ ನಾಗರಾಜ್ ವಿರುದ್ಧ ಕಿಡಿ ಕಾರಿದರು. ಯಾರೋ ಬರ್ತಾರೆ ಬಂದ್ ಮಾಡಿ ಎಂದು ಬೆದರಿಕೆ ಹಾಕ್ತಾರೆ, ಕರ್ನಾಟಕ ಏನು ಅವರಪ್ಪನ ಮನೆದಾ..? ಎಂದು ಋಷಿಕುಮಾರ ಸ್ವಾಮಿ ಕಿಡಿ ಕಾರಿದ್ದಾರೆ. ಅಲ್ಲದೆ ಯಾವನೇ ಬಂದು ಅಂಗಡಿ ಬಾಗಿಲು ಮುಚ್ಚಿಸುವ ಪ್ರಯತ್ನ ಮಾಡಿದರೆ ಅಂತವರಿಗೆ ಕಲ್ಲಲ್ಲಿ ಹೊಡೆಯಿರಿ, ಸರಿಯಾಗಿ ಬುದ್ದಿ ಕಲಿಸಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದರೆ.
ಮರಾಠಿಗರ ಪರ ಬ್ಯಾಟ್ ಬೀಸಿರುವ ಋಷಿಕುಮಾರ ಸ್ವಾಮಿ, ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿದರೆ ನಿಮಗೇನು ಕಷ್ಟ. ಅವರು ರಾಜ್ಯದಲ್ಲಿ ಟ್ಯಾಕ್ಸ್ ಕಟ್ಟುತ್ತಿದ್ದಾರೆ ಎಂದರು. ಇದರ ಜೊತೆಗೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಎಸ್‌ವೈ ಇಂತವರನ್ನೆಲ್ಲಾ ಶೂಟ್ ಮಾಡಿ ಬಿಸಾಕಬೇಕು. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಇಂತವರಿಗೆ ಹೇಗೆ ಬುದ್ದಿ ಕಲಿಸುತ್ತೆ ಗೊತ್ತಲ್ವಾ ಎಂದು ಹೇಳುವ ಮೂಲಕ ಕನ್ನಡ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.