ರೈತರಿಗೆ ಮಾರಕವಾದ ಎಪಿಎಂಸಿ ಕಾಯ್ದೆ ಸೇರಿದಂತೆ ಹಲವು ವಿಧೇಯಕಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ʼಕರ್ನಾಟಕ ಬಂದ್ʼ ಕುರಿತಂತೆ ರೈತ ನಾಯಕರಲ್ಲಿ ಗೊಂದಲ ತಲೆದೋರಿತ್ತು.
ಒಬ್ಬರು ʼಬಂದ್ʼ ಬೇಕೆಂದರೆ ಮತ್ತೊಬ್ಬರು ಸದ್ಯಕ್ಕೆ ಬಂದ್ ಅಗತ್ಯವಿಲ್ಲ. ಸರ್ಕಾರ ಇನ್ನೂ ವಿಧೇಯಕವನ್ನು ಮಂಡಿಸಿಲ್ಲ. ಹೀಗಾಗಿ ಸರ್ಕಾರ ನಮ್ಮ ಪ್ರತಿಭಟನೆಗೆ ಮಣಿದು ಇದರಿಂದ ಹಿಂದೆ ಸರಿದರೆ ಬಂದ್ ಅಗತ್ಯವಿಲ್ಲವೆಂದು ಪ್ರತಿಪಾದಿಸಿದ್ದರು.
ಆದರೆ ಸರ್ಕಾರ, ಕಲಾಪದಲ್ಲಿ ವಿಷಯವಿಲ್ಲದಿದ್ದರೂ ತರಾತುರಿಯಲ್ಲಿ ಮಸೂದೆ ಮಂಡನೆಗೆ ಮುಂದಾಗಿದ್ದು, ರೈತರನ್ನು ಕೆರಳಿಸಿದೆ. ಹೀಗಾಗಿ ವಿವಿಧ ಸಂಘಟನೆಗಳ ಮುಖಂಡರ ಜೊತೆ ಚರ್ಚೆ ನಡೆಸಿ ಅಂತಿಮವಾಗಿ ಸೆಪ್ಟೆಂಬರ್ 28 ರ ಸೋಮವಾರದಂದು ಕರ್ನಾಟಕ ಬಂದ್ ಆಚರಿಸಲು ತೀರ್ಮಾನಿಸಲಾಯಿತು ಎಂದು ಹೇಳಲಾಗಿದೆ.