ಕಡಲತೀರದಲ್ಲಿ ಬಂಡೆಗಳ ನಡುವೆ ಸಿಲುಕಿ ಬಿದ್ದಿದ್ದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ನ ಪತ್ತೆಮಾಡಿ ಹುಡುಕಿಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕರ್ನಾಟಕದ ಯುವತಿಯೊಬ್ಬರು ಕೇರಳದ ವರ್ಕಲಾದಲ್ಲಿ ಟ್ರಿಪ್ ನಲ್ಲಿದ್ದಾಗ ಆಕೆಯ 1,50,000 ರೂಪಾಯಿ ಮೌಲ್ಯದ ಐಫೋನ್ ಸಮುದ್ರತೀರದಲ್ಲಿ ಬೃಹತ್ ಬಂಡೆಗಳ ನಡುವೆ ಬಿದ್ದುಹೋಯ್ತು. ಆಕೆ ತಕ್ಷಣ ತಾನು ತಂಗಿದ್ದ ಅಂಟಿಲಿಯಾ ಶಾಲೆಟ್ ರೆಸಾರ್ಟ್ ಸಿಬ್ಬಂದಿಯ ಸಹಾಯ ಕೋರಿದ್ದರು.
ನಂತರ ರೆಸಾರ್ಟ್ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು, ಆದರೆ ಮೊಬೈಲ್ ಫೋನ್ ಸಿಗುವುದು ಕಷ್ಟವಾಯಿತು. ಬಳಿಕ ಕೇರಳ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಹಾಯವನ್ನು ಪಡೆದು ಸುದೀರ್ಘ ಏಳು ಗಂಟೆಗಳ ಕಾರ್ಯಾಚರಣೆ ಬಳಿಕ ಫೋನ್ ಸಿಕ್ಕಿತು. ಅದನ್ನು ಸಿಬ್ಬಂದಿ ಯುವತಿಗೆ ನೀಡಿದರು.
ಸುದೀರ್ಘ ಕಾರ್ಯಾಚರಣೆಯ ಸಮಯದಲ್ಲಿ ಸೆರೆಹಿಡಿಯಲಾದ ವೀಡಿಯೊವನ್ನು ರೆಸಾರ್ಟ್ @antiliyachalets ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಬಲವಾದ ಅಲೆಗಳು ಮತ್ತು ಬೀಸುವ ಗಾಳಿಯ ನಡುವೆ ಮೊಬೈಲ್ ಪತ್ತೆ ಎಷ್ಟು ಸವಾಲಿನ ಕೆಲಸವಾಗಿತ್ತು ಎಂಬುದನ್ನ ತಿಳಿಸಲಾಗಿದೆ.
ಈ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಫೋನ್ ಹಿಂಪಡೆಯಲು ಅಗ್ನಿಶಾಮಕ ದಳದವರನ್ನು ಕರೆಸಲಾಯಿತು ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಇತರರು ಈ ಘಟನೆಯನ್ನು ತಮಾಷೆಯಾಗಿ ಕಂಡಿದ್ದಾರೆ.