ಬೆಂಗಳೂರು: ರಾಜ್ಯದಲ್ಲಿ ತಮ್ಮ ಸರ್ಕಾರವು ಹೊಸ ಮತ್ತು ಪ್ರಗತಿಪರ ಕೈಗಾರಿಕಾ ನೀತಿಯನ್ನು ತರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಘೋಷಿಸಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ(ವಿಟಿಪಿಸಿ) ಆಯೋಜಿಸಿದ್ದ ‘ರಾಜ್ಯ ರಫ್ತು ಶ್ರೇಷ್ಠ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಈ ಘೋಷಣೆ ಮಾಡಿದರು.
ಈ ಬಗ್ಗೆ ಕೈಗಾರಿಕೋದ್ಯಮಿಗಳು ಮತ್ತು ರಫ್ತುದಾರರೊಂದಿಗೆ ಚರ್ಚಿಸಲಾಗುವುದು. ಈ ಹಿಂದೆ ನಮ್ಮ ಸರ್ಕಾರ ಜಾರಿಗೆ ತಂದಿರುವ ಕೈಗಾರಿಕಾ ನೀತಿಯನ್ನು ಉದ್ಯಮ ವಲಯದಿಂದ ಶ್ಲಾಘಿಸಲಾಗಿತ್ತು. ಇದು ಅತ್ಯಂತ ಪ್ರಗತಿಪರ ಕೈಗಾರಿಕಾ ನೀತಿ ಎಂದು ತಿಳಿದುಬಂದಿದೆ. ನಮ್ಮ ಸರ್ಕಾರ ಶೀಘ್ರದಲ್ಲೇ ಕೈಗಾರಿಕೋದ್ಯಮಿಗಳು ಮತ್ತು ರಫ್ತುದಾರರೊಂದಿಗೆ ಚರ್ಚಿಸಿ ಹೊಸ ಮತ್ತು ಪ್ರಗತಿಪರ ಕೈಗಾರಿಕಾ ನೀತಿಯನ್ನು ಹೊರತರಲಿದೆ ಎಂದು ಹೇಳಿದರು.
ಕೈಗಾರಿಕೆಗಳ ಉತ್ತೇಜನಕ್ಕೆ ತಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದ ಅವರು, ತ್ವರಿತ ಕೈಗಾರಿಕೀಕರಣದಿಂದ ಮಾತ್ರ ಉದ್ಯೋಗ ಸೃಷ್ಟಿ ಸಾಧ್ಯ ಎಂದರು. ಕೈಗಾರಿಕಾ ಅಭಿವೃದ್ಧಿಯು ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಆರ್ಥಿಕ ಅಭಿವೃದ್ಧಿಯು ತರುವಾಯ GDP ಮತ್ತು ಉತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನು ದೇಶದಲ್ಲಿ ಸುಧಾರಿಸುತ್ತದೆ. ಈ ಅಂಶಗಳು ಹೂಡಿಕೆಗಳಿಗೆ ಕಾರಣವಾಗುತ್ತವೆ ಎಂದು ವಿವರಿಸಿದರು.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, ಬೆಂಗಳೂರು ಜ್ಞಾನ, ಐಟಿ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರ ಎಂದು ಹೆಸರಾಗಿದೆ ಎಂದು ಹೇಳಿದರು.
ನಗರವು ಇಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಪ್ರಪಂಚದೊಂದಿಗೆ ಸ್ಪರ್ಧಿಸುವ ಮಟ್ಟದಲ್ಲಿದೆ. ಹೂಡಿಕೆ ವಿಷಯದಲ್ಲೂ ನಾವೇ ನಂಬರ್ 1 ಆಯ್ಕೆಯಾಗಿದ್ದೇವೆ, ಇದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದರು. ಎಲ್ಲವೂ ಬೆಂಗಳೂರು ಕೇಂದ್ರಿತವಾಗದಂತೆ ನೋಡಿಕೊಳ್ಳಲು ರಾಜ್ಯದ 2-3 ಶ್ರೇಣಿಯ ನಗರಗಳಲ್ಲಿ ಕೈಗಾರಿಕೀಕರಣವನ್ನು ಸರ್ಕಾರ ಪ್ರೋತ್ಸಾಹಿಸುತ್ತದೆ ಮತ್ತು ರಫ್ತುದಾರರು ಸೇರಿದಂತೆ ಹೂಡಿಕೆದಾರರಿಗೆ ಎಲ್ಲಾ ಬೆಂಬಲವನ್ನು ನೀಡಲು ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.
ದೇಶದಲ್ಲಿಯೇ ಅತ್ಯುತ್ತಮ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಹೊಂದಲು ಸರ್ಕಾರ ಶ್ರಮಿಸಲಿದೆ. ರಾಜ್ಯವು ಉದ್ಯಮ ಸ್ನೇಹಿ ವಾತಾವರಣವನ್ನು ಹೊಂದಿದೆ. ಕೈಗಾರಿಕೆಗಳ ಬೆಳವಣಿಗೆಯನ್ನು ಉತ್ತೇಜಿಸಲು ಆಯ್ದ ಏಳು ವಲಯಗಳಲ್ಲಿ ವಿಷನ್ ಗ್ರೂಪ್‌ಗಳನ್ನು ರಚಿಸಲಾಗುವುದು. MSME ಬೆಂಬಲಿಸುವುದು ಮತ್ತು ಪ್ರೋತ್ಸಾಹಿಸುವುದು ಈ ಸರ್ಕಾರದ ಸಾಮಾಜಿಕ ಜವಾಬ್ದಾರಿಯಾಗಿದೆ. MSMEಗಳನ್ನು ಸಬಲೀಕರಣಗೊಳಿಸಲು ನಾವು ಟಾಟಾ ಟೆಕ್ನಾಲಜಿಯೊಂದಿಗೆ ಕೆಲಸ ಮಾಡುತ್ತೇವೆ ಎಂದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ಅವರು ಹೇಳಿದರು.