ಬೆಂಗಳೂರು : ಬೇಸಿಗೆಗೂ ಮುನ್ನವೇ ರಣಬಿಸಿಲು ರಾಜ್ಯದ ಜನರನ್ನು ಸುಡುತ್ತಿದೆ. ರಾಜ್ಯದಲ್ಲಿ ಬೇಸಿಗೆಗೂ ಮುನ್ನವೇ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಹಲವು ಜಿಲ್ಲೆಗಳಲ್ಲಿ ತಾಪಮಾನ 30 ಡಿಗ್ರಿ ಸೆ.ಮೀರಿದೆ.
ಚಳಿಯಿಂದ ನಡುಗುತ್ತಿದ್ದ ಜನರು ಬಿಸಿಲಿನ ಶಾಖಕ್ಕೆ ಹೈರಾಣಾಗಿದ್ದಾರೆ. ಫೆಬ್ರವರಿ ತಿಂಗಳಿನಿಂದಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಈ ಬಾರಿ ಬೇಸಿಗೆಯಲ್ಲಿ ಇನ್ನೂ ಹೆಚ್ಚಿನ ತಾಪಮಾನ ದಾಖಲಾಗುವುದರಲ್ಲಿ ಅಚ್ಚರಿ ಇಲ್ಲ.
ಕಲಬುರಗಿ 36.8, ಬಾಗಲಕೋಟೆ 34.8, ರಾಯಚೂರು 34.0. ವಿಜಯಪುರ 33.5, ಬೀದರ್ 33.4 ಸೆ.ಉಷ್ಣಾಂಶ ದಾಖಲಾಗಿದೆ.
ಫೆಬ್ರವರಿ ತಿಂಗಳಲ್ಲಿ 25 ರಿಂದ 26 ಡಿಗ್ರೀ ಸೆ. ಉಷ್ಣಾಂಶ ದಾಖಲಾಗುತ್ತುತ್ತು. ಆದ್ರೆ ಈ ಬಾರಿ ಹಲವು ಜಿಲ್ಲೆಗಳಲ್ಲಿ 30 ಡಿ.ಸೆ ಗೂ ಮೀರಿ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಉತ್ತರ ಕರ್ನಾಟದಲ್ಲಿ ಈಗಾಗಲೇ 32-34 ಡಿಗ್ರಿ ತಾಪಮಾನ ದಾಖಲಾಗಿದೆ.
ಬೇಸಿಗೆಯಲ್ಲಿ ಇರಲಿ ಈ ಮುನ್ನೆಚ್ಚರಿಕೆ
ಬೇಸಿಗೆಯಲ್ಲಿ ದೀರ್ಘಕಾಲದವರೆಗೆ ಸೂರ್ಯನ ಬೆಳಕು ಮತ್ತು ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ ದೇಹದಲ್ಲಿನ ನೀರು ಕಳೆದುಹೋಗುತ್ತದೆ. ನಂತರ ದೇಹದ ಉಷ್ಣತೆಯು ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ಸಿಂಪೆಥೆಟಿಕ್ ನರಮಂಡಲವು ಸಕ್ರಿಯಗೊಳ್ಳುತ್ತದೆ ಮತ್ತು ದೇಹವು ಒತ್ತಡದ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ನೀರಿನ ಕೊರತೆಯಿಂದ ರಕ್ತದ ಪ್ರಮಾಣವೂ ಕಡಿಮೆಯಾಗುತ್ತದೆ. ರಕ್ತದ ದಪ್ಪವಾಗುವುದರಿಂದ, ಹೃದಯ ಮತ್ತು ಅಪಧಮನಿಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಆಗ ನಮ್ಮ ಚರ್ಮವು ಶಾಖವನ್ನು ವೇಗವಾಗಿ ಹೊರಸೂಸುತ್ತದೆ. ಈ ಪರಿಸ್ಥಿತಿಯಲ್ಲಿ ಹೆಚ್ಚು ಬೆವರುವುದಿಲ್ಲ, ಪರಿಣಾಮ ದೇಹವು ತಣ್ಣಗಾಗಲು ಸಾಧ್ಯವಾಗುವುದಿಲ್ಲ. ಇದು ಹೀಟ್ ಸ್ಟ್ರೋಕ್ ಮತ್ತು ಡಿಹೈಡ್ರೇಶನ್ಗೆ ಕಾರಣವಾಗುತ್ತದೆ.
ನಿರ್ಜಲೀಕರಣದಿಂದ ಪಾರಾಗುವುದು ಹೇಗೆ?
ಸುಡುವ ಶಾಖದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅದರಲ್ಲೂ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಇನ್ನೂ ಹೆಚ್ಚು ಎಚ್ಚರದಿಂದಿರಬೇಕು.
ನಮ್ಮ ದೇಹದ ಹೆಚ್ಚಿನ ಭಾಗವು ನೀರಿನಿಂದ ಮಾಡಲ್ಪಟ್ಟಿದೆ. ಹಾಗಾಗಿ ನೀರಿನ ಕೊರತೆಯಿಂದ ಡಿಹೈಡ್ರೇಶನ್ ಉಂಟಾಗುತ್ತದೆ. ಇದನ್ನು ತಪ್ಪಿಸಲು ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಎಳನೀರು, ನಿಂಬೆ ಪಾನಕ ಮತ್ತು ಎಲ್ಲಾ ರೀತಿಯ ತಾಜಾ ಹಣ್ಣಿನ ರಸವನ್ನು ಕುಡಿಯಬಹುದು.
ಪ್ರಖರ ಬಿಸಿಲು ಮತ್ತು ವಿಪರೀತ ತಾಪಮಾನವಿದ್ದಾಗ ಮನೆಯಲ್ಲಿಯೇ ಇರಲು ಪ್ರಯತ್ನಿಸಿ. ತೀರಾ ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಹೋಗಿ. ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಡಿ. ಹತ್ತಿಯ ಸಡಿಲವಾದ ಬಟ್ಟೆಗಳನ್ನು ಧರಿಸಿ. ಟೋಪಿ, ಕ್ಯಾಪ್ ಅಥವಾ ಛತ್ರಿಯನ್ನು ಸಹ ಬಳಸಬಹುದು. ಯಾವಾಗಲೂ ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಿ.