ಧಾರವಾಡ: ಭಾರತಾಂಬೆಗೆ ಅವಮಾನ ಮಾಡುವ ಅಂಶ ಒಳಗೊಂಡಿದೆ ಎನ್ನುವ ಆರೋಪ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಬೆಳಗು-1ರ ಪಠ್ಯದಲ್ಲಿನ ಪಾಠವನ್ನು ಕರ್ನಾಟಕ ವಿಶ್ವವಿದ್ಯಾಲಯ ಹಿಂಪಡೆದುಕೊಂಡಿದೆ.
ಕರ್ನಾಟಕ ವಿಶ್ವವಿದ್ಯಾಲಯ 2024- 25ನೇ ಸಾಲಿನ ಕನ್ನಡ ಸ್ನಾತಕ ಪದವಿ ಬಿಎ ಪ್ರಥಮ ಸೆಮಿಸ್ಟರ್ ಪಠ್ಯಪುಸ್ತಕ ಬೆಳಗು-1ರಲ್ಲಿ ಪ್ರಕಟವಾಗಿದ್ದ ಆಕ್ಷೇಪಾರ್ಹ ಅಂಶಗಳಿಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪಠ್ಯಪುಸ್ತಕದಲ್ಲಿನ ಲೇಖನ ಹಿಂಪಡೆಯಲು ಕರ್ನಾಟಕ ವಿವಿ ತುರ್ತು ನಿರ್ಣಯ ಕೈಗೊಂಡಿದೆ.
ಬೆಳಗು-1ರ ನಾಲ್ಕನೇ ಅಧ್ಯಾಯದ ‘ರಾಷ್ಟ್ರೀಯತೆ ಆಚರಣೆಯ ಸುತ್ತ’ ಕುರಿತು ರಾಮಲಿಂಗಪ್ಪ ಟಿ. ಬೇಗೂರು ಅವರು ಬರೆದ ಲೇಖನದಲ್ಲಿ ಕೆಲವು ಆಕ್ಷೇಪಾರ್ಹ ಅಂಶ ಒಳಗೊಂಡಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕ ವಿವಿ ಆಡಳಿತ ವಿಭಾಗದಿಂದ ಸಭೆ ನಡೆಸಿ ತಕ್ಷಣದಿಂದ ಜಾರಿಗೆ ಬರುವಂತೆ ಪಠ್ಯ ಲೇಖನವನ್ನು ಹಿಂಪಡೆಯಲಾಗಿದೆ. ಅದನ್ನು ಹೊರತುಪಡಿಸಿ ಬೆಳಗು -1 ಪಠ್ಯಪುಸ್ತಕ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ವಿವಾದಿತ ಪಠ್ಯ ವಾಪಸ್ ಬಗ್ಗೆ ಕರ್ನಾಟಕ ವಿವಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಮೌಲ್ಯಮಾಪನ ಕುಲಸಚಿವರು ಆದೇಶ ಹೊರಡಿಸಿದ್ದು, ಬೆಳಗು-1ರ ಪಠ್ಯದಲ್ಲಿನ ವಿವಾದಿತ ಅಧ್ಯಾಯವನ್ನು ವಾಪಸ್ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.