ಪಠ್ಯ ಪುಸ್ತಕ ಪರಿಷ್ಕರಣೆ ಆದಾಗಿನಿಂದಲೂ ಕೂಡ ಒಂದಲ್ಲ ಒಂದು ವಿವಾದ ಕೇಳಿ ಬರುತ್ತಲೇ ಇದೆ. ರೋಹಿತ್ ಚಕ್ರತೀರ್ಥ ಪರಿಷ್ಕರಣೆ ಮಾಡಿದ ಪಠ್ಯ ಸರಿ ಇಲ್ಲ ಅಂತ ಕಾಂಗ್ರೆಸ್ ಆರೋಪ ಮಾಡುತ್ತಲೇ ಇದೆ. ಇದೀಗ ಸಾವಿತ್ರಿ ಬಾಯಿ ಫುಲೆ ಪಠ್ಯ ಕೈ ಬಿಡಲಾಗಿದೆ ಎಂದು ಆರೋಪ ಮಾಡಿತ್ತು. ಈ ವಿಚಾರವಾಗಿ ಶಿಕ್ಷಣ ಸಚಿವ ನಾಗೇಶ್ ತಿರುಗೇಟು ನೀಡಿದ್ದಾರೆ.
ಹೌದು, ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಮತ್ತು ಅದೇ ಸತ್ಯ ಎಂದು ಜನರನ್ನು ನಂಬಿಸಲು ಯತ್ನಿಸುವುದು ಕಾಂಗ್ರೆಸ್ಸಿಗರ ದಿನಚರಿಯಾಗಿದೆ. ಸತ್ಯ ಕಣ್ಣ ಮುಂದಿರುವಾಗ ನಿಮ್ಮ ಹಸಿ ಸುಳ್ಳುಗಳನ್ನು ಜನರು ನಂಬಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದ್ದಾರೆ. ಅಷ್ಟೆ ಅಲ್ಲ ಪುಸ್ತಕದ ಕೆಲವೊಂದು ಪೇಜ್ ಗಳನ್ನು ಪೋಸ್ಟ್ ಮಾಡಿದ್ದಾರೆ.
ಶಾಲೆಗಳು ಆರಂಭವಾಗಿ ಅರ್ಧ ವರ್ಷವೇ ಕಳೆದಿದೆ. ಈಗಾಗಲೇ ಮಕ್ಕಳು ಪರಿಷ್ಕರಣಾ ಪುಸ್ತಕಗಳನ್ನು ಓದುತ್ತಿದ್ದಾರೆ. ಆದರೂ ಈ ಆರೋಪ – ಪ್ರತ್ಯಾರೋಪಗಳು ಇನ್ನೂ ನಿಂತಿಲ್ಲ. ದಿನಕ್ಕೊಂದರಂತೆ ಒಂದಿಷ್ಟು ವಿವಾದ ಸೃಷ್ಟಿ ಆಗುತ್ತಲೇ ಇದೆ. ಕುವೆಂಪು, ಬಸವಣ್ಣ ಹೀಗೆ ಅನೇಕರ ವಿಚಾರದಲ್ಲೂ ಪಠ್ಯದ ವಿವಾದ ಇತ್ತು. ಸಾವಿತ್ರಿ ಬಾಯಿ ಫುಲೆ ವಿಚಾರವಾಗಿ ಕಾಂಗ್ರೆಸ್ ಆರೋಪ ಮಾಡಿ ಪೇಚಿಗೆ ಸಿಲುಕಿತಾ ಅನ್ನೋ ಅನುಮಾನ ಈಗ ಶುರುವಾಗಿದೆ.