ಬೆಂಗಳೂರು : ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2023ರ ಪರೀಕ್ಷೆಯನ್ನು ಕೇಂದ್ರೀಕೃತ ದಾಖಲಾತಿ ಘಟಕ ಬೆಂಗಳೂರು ಇವರ ವತಿಯಿಂದ ಸೆ.03 ರಂದು ಮೊದಲ ಅಧಿವೇಶನ ಬೆಳಿಗ್ಗೆ 9.30 ರಿಂದ 12.00 ಗಂಟೆಯವರೆಗೆ ಎರಡನೇ ಅಧಿವೇಶನ ಮಧ್ಯಾಹ್ನ 2.00 ರಿಂದ 4.30 ರವರೆಗೆ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.
ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು schooleducation.kar.nic.in ವೆಬ್‍ಸೈಟ್‍ನಲ್ಲಿ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸುವುದರ ಮೂಲಕ ಪ್ರವೇಶ ಪತ್ರಗಳ ಡೌನ್‍ಲೋಡ್ ಮಾಡಿಕೊಳ್ಳಬಹುದು.
ಸೂಚನೆಗಳು
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರತಿ ಅಧಿವೇಶನದ ಪರೀಕ್ಷಾ ಪ್ರಾರಂಭದ ಅವಧಿಗಿಂತ ಒಂದು ಗಂಟೆ ಮುಂಚಿತವಾಗಿ ಹಾಜರಿರಬೇಕು. ಪರೀಕ್ಷೆ ಪತ್ರ ಇಲ್ಲದೇ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಈ ಬಗ್ಗೆ ಯಾವುದೇ ವಿನಾಯಿತಿ ಇರುವುದಿಲ್ಲ. ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು, ಸ್ಥಾನಿಕ ಜಾಗ್ರತಾ ದಳದ ಅಧಿಕಾರಿಗಳನ್ನು ಮತ್ತು ಮೊಬೈಲ್ ಸ್ವಾಧೀನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ 20 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಅದರಲ್ಲಿ ಪ್ರತಿ ಬೆಂಚ್‍ಗೆ ಇಬ್ಬರು ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಆಸನ ವ್ಯವಸ್ಥೆ ಸಜ್ಜುಗೊಳಿಸಲಾಗಿದೆ.
ಪೂರ್ವ ಮುದ್ರಿತ ಓಎಂಆರ್ ನಲ್ಲಿ ಒಮ್ಮೆ ಬರೆದಿರುವುದನ್ನು ಪುನ: ಬದಲಾಯಿಸುವುದು , ತಿದ್ದುವುದು , ಬಿಳಿ ಪ್ಲ್ಯೂಯಿಡ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಬಿಳಿ ಪ್ಲ್ಯೂಯಿಡ್ ಹಚ್ಚಿ ಉತ್ತರ ಬದಲಾಯಿಸಲು ಅವಕಾಶವಿಲ್ಲ. ಇಂತಹ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ. ಪರೀಕ್ಷೆಗೆ ಆಗಮಿಸುವ ಅಭ್ಯರ್ಥಿಗಳು ಮೊಬೈಲ್ ಫೋನ್, ಬ್ಲೂಟೂತ್ ಡಿವೈಸ್, ಪೇಜರ್, ವೈರ್‍ಲೆಸ್, ಕ್ಯಾಲ್ಕುಲೇಟರ್, ಮೊದಲಾದ ಎಲೆಕ್ಟ್ರಾನಿಕ್ ಉಪಕರಣಗಳು, ಸ್ಲೈಡ್ ರೂಲುಗಳು, ಮಾರ್ಕರ್‍ಗಳು, ಲಾಗ್ ಟೇಬಲ್‍ಗಳು, ವೈಟ್‍ಫ್ಲೂಯಿಡ್‍ಗಳು, ಬ್ಲೇಡು, ಇಂಕ್ ಎರೇಸರ್, ಬಿಳಿ ಫ್ಲೂಯಿಡ್, ಬೆಂಕಿ ಪೊಟ್ಟಣ, ಸಿಗರೆಟ್ ಲೈಟರ್ ಮುಂತಾದವುಗಳನ್ನು ಪರೀಕ್ಷಾ ಕೇಂದ್ರದ ಆವರಣದೊಳಗೆ ತರುವುದನ್ನು ನಿಷೇಧಿಸಲಾಗಿದೆ.
ವಿಕಲಚೇತನ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅಂಗವಿಕಲತೆಯ ಪ್ರಮಾಣ ಪತ್ರವನ್ನಾಧರಿಸಿ ಪರೀಕ್ಷೆ ಬರೆಯಲು ಒಂದು ಗಂಟೆಗೆ ಇಪ್ಪತ್ತು ನಿಮಿಷಗಳಂತೆ 50 ನಿಮಿಷ ಹೆಚ್ಚಿನ ಕಾಲಾವಕಾಶ ನೀಡಿದೆ. ಆನ್‍ಲೈನ್ ಅರ್ಜಿಯನ್ನು ಸಲ್ಲಿಸುವಾಗ ಸಹಾಯಕ ಬರಹಗಾರರನ್ನು ಕೋರಿರುವರು ಒಂದು(01) ದಿನ ಮುಂಚಿತವಾಗಿ ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಭೇಟಿ ಮಾಡಿ ವಿವರವನ್ನು ಸಲ್ಲಿಸಬೇಕು ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.