ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿ ಊಟದಲ್ಲಿ ಮೊಟ್ಟೆ ಬಡಿಸುವ ಕುರಿತಂತೆ ಪರ – ವಿರೋಧದ ಚರ್ಚೆಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಇತ್ತೀಚೆಗೆ ಬಿಜೆಪಿ ನಾಯಕಿ ತೇಜಸ್ವಿನಿ ಅನಂತಕುಮಾರ್ ನೀಡಿದ ಹೇಳಿಕೆ ಕಾರಣಕ್ಕೆ ಈ ವಿಷಯ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ಇದರ ಮಧ್ಯೆ ಅಧ್ಯಯನವೊಂದು ಮೊಟ್ಟೆ ಸೇವನೆ ಕುರಿತಂತೆ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಮೊಟ್ಟೆ ಸೇವಿಸಿದ ಮಕ್ಕಳ ಆರೋಗ್ಯ ಗಮನಾರ್ಹ ಸುಧಾರಣೆ ಕಂಡಿರುವುದು ತಿಳಿದು ಬಂದಿದೆ. ಎಂಟನೇ ತರಗತಿ ವಿದ್ಯಾರ್ಥಿನಿಯರು ಮೊಟ್ಟೆ ಸೇವಿಸದ ತಮ್ಮ ಇತರೆ ಸ್ನೇಹಿತರಿಗಿಂತ ಶೇಕಡಾ 71 ರಷ್ಟು ಹೆಚ್ಚು ತೂಕವನ್ನು ಹೊಂದಿರುವುದು ಕಂಡುಬಂದಿದೆ.
ಕರ್ನಾಟಕ ಸರ್ಕಾರ ನೇಮಿಸಿದ ಈ ಸಮಿತಿ ಎರಡು ಜಿಲ್ಲೆಗಳ 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಧ್ಯಯನ ನಡೆಸಿದ್ದು ಮೊಟ್ಟೆಗಳು ಮತ್ತು ಬಾಳೆಹಣ್ಣುಗಳ ಪರಿಚಯದಿಂದಾಗಿ ವಿದ್ಯಾರ್ಥಿನಿಯರ ಬಾಡಿ ಮಾಸ್ ಇಂಡೆಕ್ಸ್ ಸುಧಾರಿಸಿರುವುದು ತಿಳಿದು ಬಂದಿದೆ. ಗದಗ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ಅಧ್ಯಯನ ನಡೆಸಲಾಗಿತ್ತು.
ಮೂರು ತಿಂಗಳ ಅವಧಿಯ ಈ ಅಧ್ಯಯನದಲ್ಲಿ ಈ ಮಹತ್ವದ ವಿಷಯ ಕಂಡು ಬಂದಿದ್ದು, ಯಾದಗಿರಿಯಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ನೀಡುತ್ತಿದ್ದು ಮೊಟ್ಟೆ ಬೇಡವೆಂದವರಿಗೆ ಬಾಳೆಹಣ್ಣು ನೀಡಲಾಗಿತ್ತು. ಗದಗದಲ್ಲಿ ಹಾಲಿನೊಂದಿಗೆ ನಿತ್ಯ ಸಸ್ಯಹಾರಿ ಊಟ ನೀಡಲಾಗುತ್ತಿತ್ತು. ಯಾದಗಿರಿ ಜಿಲ್ಲೆಯ ಮಕ್ಕಳಲ್ಲಿ ಆರೋಗ್ಯ ಗಣನೀಯವಾಗಿ ಸುಧಾರಿಸಿರುವುದು ಕಂಡುಬಂದಿದೆ. ಹೀಗಾಗಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ನೀಡುವುದು ಸೂಕ್ತ ಎಂದು ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.